ದೀರ್ಘಕಾಲದ ಚಿಂತನೆಯಿಂದ ಕಾವ್ಯ ಸೃಷ್ಟಿ

27 gkp 02
Published on

ಗೋಣಿಕೊಪ್ಪ: ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಹಯೋಗದಲ್ಲಿ ಆಯಿರ ಸುಳಿ ಹಾಡಿಯಲ್ಲಿ ಆಯೋಜಿಸಿದ್ದ ಯುಗಾದಿ ಕವಿಗೋಷ್ಠಿಯಲ್ಲಿ ಕವನಗಳ ಸಾಲು ಕಿವಿಯಲ್ಲಿ ಮಾರ್ದನಿಸಿದವು.


28 ಕವನಗಳನ್ನು ಹೊತ್ತ ಕನವರಿಕೆಯ ಸಾಲುಗಳು ಕವನ ಸಂಕಲನ ಬಿಡುಗಡೆ, ಪ್ರಕೃತಿಯ ಮಡಿಲಿನಲ್ಲಿ ಚಪ್ಪರದ ಕೆಳಗೆ ನಡೆದ ಕಾರ್ಯಕ್ರಮ ಕವಿಗಳಿಗೆ ಮನೋಲ್ಲಾಸ ನೀಡಿತು. ಗಿಡಕ್ಕೆ ನೀರೆರೆಯುವ ಮೂಲಕ ಕವಯತ್ರಿ ಸ್ಮಿತಾ ಅಮೃತರಾಜ್ ಉದ್ಘಾಟಿಸಿ ಮಾತನಾಡಿ, ಅಚ್ಚರಿ, ಬೆರಗು ಕಾವ್ಯದ ಹುಟ್ಟಿಗೆ ಮೂಲವಾಗಲಿದೆ. ಸುಲಭವಾಗಿ ಕಾವ್ಯ ಹುಟ್ಟುವುದಿಲ್ಲ. ದೀರ್ಘಕಾಲದ ಚಿಂತನೆಯಲ್ಲಿ ಕಾವ್ಯ ತೆರೆದುಕೊಳ್ಳಲಿದೆ. ಇದರಿಂದಾಗಿ ಕವನ ಸಾಲುಗಳಲ್ಲಿ ಮೂಡಿ ಬರಲು ಸಮಯ ಕೂಡ ಮುಖ್ಯ. ಮನದಲ್ಲಿ ಹುಟ್ಟಿ ಬರುವ ಪದಗಳಿಗೆ ಏಕಾಗ್ರತೆ ಅನಿವಾರ್ಯವಾಗಿದ್ದು, ದೇವರ ಅನುಗ್ರಹದಿಂದ ಅದು ಸಾಧ್ಯವಿದೆ. ಅವಸರವಿಲ್ಲದೆ ನಿರಂತರ ಪರಿಶ್ರಮವಿಟ್ಟಾಗ ಮನಕೊಪ್ಪುವ ಕವನ ಜನ್ಮ ತಾಳಲಿದೆ ಎಂದು ಅಭಿಪ್ರಾಯಪಟ್ಟರು.


ಕನವರಿಕೆಯ ಸಾಲುಗಳು ಕವನ ಸಂಕಲನವನ್ನು ಕುಕ್ಕೆಯಲ್ಲಿ ಬೇವಿನ ಸೊಪ್ಪು, ಬೆಲ್ಲ, ಹೂವಿನಲ್ಲಿಟ್ಟು ಹೊರ ತೆಗೆಯುವ ಮೂಲಕ ಉದ್ಘಾಟಿಸಲಾಯಿತು. ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಕೆ. ರೆಜಿತ್‌ಕುಮಾರ್, ಪೊನ್ನಂಪೇಟೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕವಿಗೋಷ್ಠಿ ಸಂಚಾಲಕ ಕೆ. ಬಿ. ಜಗದೀಶ್ ಜೋಡುಬೀಟಿ ಇದ್ದರು.


ಸಮಾರೋಪ ಸಮಾರಂಭ: ಬಳಿಕ ಜರುಗಿದ ಸಮಾರೋಪ ಸಮಾರಂಭದಲ್ಲಿ ಕವಿಗಳಿಗೆ ಸ್ಮರಣಿಕೆ, ಗೌರವ ಧನ ನೀಡಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ ಕಾಜೂರು ಸತೀಶ್, ಕಲಾವಿದನ ಮನದಲ್ಲಿ ಹುಟ್ಟಿ ಬರುವ ಸಾಕಷ್ಟು ಕಲೆಗಳು ವ್ಯಕ್ತಗೊಳ್ಳದಿದ್ದಾಗ, ಯಾರೂ ಆಲಿಸದಿದ್ದಾಗ ಮನಸ್ಸು ಕೊರಗಿನಲ್ಲಿಯೇ ದಿನದೂಡುವಂತಾಗುತ್ತದೆ. ಕಲೆ ಅನಾವರಣಗೊಳ್ಳದಿದ್ದಾಗ ಚಟಕ್ಕೆ ದಾಸ್ಯನಾಗುವಂತಾಗುತ್ತಾನೆ ಎಂದರು.


ತಿತಿಮತಿ ಗ್ರಾ.ಪಂ. ಸದಸ್ಯ ಎನ್. ಅನೂಪ್, ಹಾಡಿ ಮುಖಂಡ ದಿನೇಶ್, ಕೊಡಗು ಪ್ರೆಸ್‌ಕ್ಲಬ್ ನಿರ್ದೇಶಕ ಪುತ್ತಂ ಪ್ರದೀಪ್, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ. ವಿ. ಅರುಣ್‌ಕುಮಾರ್, ನಿರ್ದೇಶಕರಾದ ದರ್ಶನ್ ದೇವಯ್ಯ, ಎಂ.ಎಂ. ಚನ್ನನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net