

ಬಾಳೆಹೊನ್ನೂರು: ಹೋಬಳಿಯಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಹಬ್ಬದ ಆಚರಣೆಗೆ ಭರದ ಸಿದ್ಧತೆ ನಡೆದಿದೆ.
ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಲಾಗಿದೆ. ಪಟ್ಟಣದ ಸುತ್ತಮುತ್ತ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಂಪ್ರದಾಯಿಕ ಹುಲಿ ವೇಷಧಾರಿಗಳು, ಸಿಂಹ ವೇಷಧಾರಿಗಳು, ಬಯಲುಸೀಮೆಯ ರಾಮ, ಲಕ್ಷ್ಮಣ, ಹನುಮಂತರ ತಂಡ ಆಗಮಿಸಿದ್ದು, ಮನೆ ಮನೆಗೆ ಭೇಟಿ ನೀಡಿ ಮನರಂಜನೆ ನೀಡುತ್ತಿವೆ. ವಿವಿಧೆಡೆಯಿಂದ ಬಂದಿರುವ ಸಾಂಪ್ರದಾಯಿಕ ವೇಷಧಾರಿಗಳು, ಸ್ಥಳೀಯ ಯುವಕರ ಕರಡಿಕುಣಿತ, ಕೊರಗನ ನೃತ್ಯ ಹಾಗೂ ಸ್ಥಳೀಯ ಗ್ರಾಮೀಣ ಪ್ರದೇಶದವರ ಜನಪದ ಹಾಡಿನ ಕಾರ್ಯಕ್ರಮವೂ ಎಲ್ಲ ಭಾಗಗಳಲ್ಲಿ ನಡೆಯುತ್ತಿದೆ.
ಗ್ರಾಮೀಣ ಭಾಗಗಳಲ್ಲಿ ಬುಧವಾರ ನೀರು ತುಂಬುವ ಹಬ್ಬ ನಡೆಯುವುದರೊಂದಿಗೆ ದೀಪಾವಳಿಗೆ ವಿಧ್ಯುಕ್ತ ಚಾಲನೆ ದೊರೆತಿದೆ. ಅ.31ರಂದು ಮುಂಜಾನೆ ಅಭ್ಯಂಜನ ಸ್ನಾನ ಹಾಗೂ ಮಲೆನಾಡಿನ ಸಂಪ್ರದಾಯದಂತೆ ಮುಂಡುಗ (ಹೂ) ಹಾಕಲಿದ್ದಾರೆ. ಈ ಬಾರಿ ಗುರುವಾರ ಹಾಗೂ ಶುಕ್ರವಾರ ದಿನ ಅಮಾವಾಸ್ಯೆ ಬಂದಿರುವುದರಿಂದ ಎರಡು ದಿನಗಳ ಕಾಲ ಪಟ್ಟಣದ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಲಿದೆ. ಶನಿವಾರ ಬಲಿಪಾಡ್ಯಮಿ ಪ್ರಯುಕ್ತ ಗೋಪೂಜೆ ನಡೆಯಲಿದೆ.