

ಚಿತ್ರದುರ್ಗ: ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ನಗರ ಸೇರಿ ಜಿಲ್ಲಾದ್ಯಂತ ಉತ್ಸಾಹದಿಂದ ಆಚರಿಸುವ ಸಲುವಾಗಿ ಗುರುವಾರದಿಂದಲೇ ಸಿದ್ಧತೆಗಳು ಭರದಿಂದ ಸಾಗಿವೆ. ಪೂಜಾ ಸಾಮಗ್ರಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗಳ ಬಳಿ ಬಹುತೇಕರು ಮುಗಿಬಿದ್ದ ದೃಶ್ಯ ವಿವಿಧೆಡೆ ಕಂಡುಬಂದಿತು.
ಶನಿವಾರದಂದು ವಿಶೇಷವಾಗಿ ಆಚರಿಸಲಿರುವ ಬಲಿಪಾಡ್ಯಮಿ ಹಬ್ಬಕ್ಕೂ ಕ್ಷಣಗಣನೆ ಆರಂಭವಾಗಿದ್ದು, ಅದಕ್ಕಾಗಿ ಗುರುವಾರವೇ ನರಕ ಚತುದರ್ಶಿಯೊಂದಿಗೆ ಬಹುತೇಕರು ನೆಂಟರು, ಬಂಧು, ಮಿತ್ರರನ್ನು ಹಬ್ಬಕ್ಕೆ ಸ್ವಾಗತಿಸಿ ಸಂಭ್ರಮಿಸಿದರು. ದೇವರಿಗೆ ಎಡೆ ಸಮರ್ಪಿಸಿದರು. ಕತ್ತಲು ಆವರಿಸುತ್ತಿದ್ದಂತೆ ಬಾನಂಗಳದಲ್ಲಿ ಪಟಾಕಿಗಳ ಸದ್ದು ಮೊಳಗಿತು. ಅದರಿಂದ ಹೊರಬಂದ ಚಟಪಟ ಸದ್ದು, ವಿವಿಧ ವರ್ಣದ ಬೆಂಕಿಯ ಕಿಡಿ ಚಿಣ್ಣರನ್ನು ಆಕರ್ಷಿಸಿತು.
ಈ ಹಬ್ಬದಲ್ಲಿ ಬಹುಮುಖ್ಯವಾಗಿ ಪೂಜೆಗೆ ಬಳಸುವ ಸಾಮಗ್ರಿಗಳಾದ ವೈವಿಧ್ಯಮಯ ಅಣತೆಗಳು, ಹೊಂಬಾಳೆ, ಕಂಚಿಕಡ್ಡಿ, ಬ್ರಹ್ಮದಂಡೆ ಗಿಡ, ಬಿಲ್ವ ಪತ್ರೆ, ತಂಗಟೆ-ತುಂಬೆ ಹೂ, ವಿವಿಧ ಹಣ್ಣುಗಳು, ಬಾಳೆ-ಮಾವಿನ ಎಲೆ, ಬಾಳೆ ದಿಂಡು ಸೇರಿ ಇತರೆ ವಸ್ತುಗಳ ಖರೀದಿ ಭರಾಟೆಯೂ ಹಳೆ ಮಾಧ್ಯಮಿಕ ಶಾಲಾ ಆವರಣ, ಆನೆಬಾಗಿಲು ಮಾರ್ಗ, ಸಂತೆಹೊಂಡ, ಗಾಂಧಿ ವೃತ್ತದ ಸಮೀಪದಲ್ಲಿ ಜೋರಾಗಿ ನಡೆಯಿತು.
ವಸ್ತ್ರೋದ್ಯಮಕ್ಕೂ ಬೇಡಿಕೆ: ಹೊಸ ಬಟ್ಟೆ ಧರಿಸಿ ಹಬ್ಬವನ್ನಾಚರಿಸುವ ಸಲುವಾಗಿ ಖರೀದಿಸಲು ಗ್ರಾಮೀಣ ಭಾಗದಿಂದ ಅನೇಕರು ನಗರಕ್ಕೆ ಬಂದಿದ್ದರು. ಹೀಗಾಗಿ ಬಟ್ಟೆ ಅಂಗಡಿಗಳಲ್ಲೂ ಜನಸಂದಣಿ ಹೆಚ್ಚಿತ್ತು. ಗ್ರಾಹಕರ ಸದಭಿರುಚಿಗೆ ತಕ್ಕಂತೆ ಆಕರ್ಷಕ ಉಡುಪುಗಳನ್ನು ಕಣ್ಣಿಗೆ ರಾಚುವ ಹಾಗೆ ಹಾಕಲಾಗಿತ್ತು. ತಮಗಿಷ್ಟವಾದುದ್ದನ್ನು ಖರೀದಿಸಲು ಮುಂದಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೀದಿ ಬದಿಯ ವ್ಯಾಪಾರ ಗಮನ ಸೆಳೆಯಿತು. ಒಟ್ಟಾರೆ ವಸ್ತ್ರೋದ್ಯಮಕ್ಕೂ ಬೇಡಿಕೆ ಕಂಡುಬಂದಿತು.
ಹಲವು ವಸ್ತುಗಳನ್ನು ಖರೀದಿಸಲು ಜನಸಂದಣಿ ಅಧಿಕವಾದ್ದರಿಂದಾಗಿ ಮುಖ್ಯ ರಸ್ತೆ ಮಾರ್ಗಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಇದೇ ರೀತಿ ಶನಿವಾರ ಬೆಳಗ್ಗೆ 10ರ ವರೆಗೂ ವ್ಯಾಪಾರ ಚಟುವಟಿಕೆ ಗರಿಗೆದರಲಿದೆ.
ವಿವಿಧ ವಿನ್ಯಾಸದ 20 ರೂ.ನಿಂದ 400 ರೂ.ವರೆಗಿನ ಮಣ್ಣಿನ ಅಣತೆಗಳನ್ನು ವ್ಯಾಪಾರಸ್ಥರು ಅಲ್ಲಲ್ಲಿ ಮಾರಾಟ ಮಾಡುತ್ತಿದ್ದರು. ಆಕರ್ಷಕ ದೀಪಗಳು ಹೆಂಗಳೆಯರ ಗಮನ ಸೆಳೆದವು. ಇದೇ ವೇಳೆ ಅನೇಕರು ಖರೀದಿಯಲ್ಲಿ ನಿರತರಾದರು.
ಮನೆಗಳಲ್ಲಿ ಪ್ರತಿಷ್ಠಾಪಿಸುವ ಮಹಾಲಕ್ಷ್ಮೀ ಮೂರ್ತಿ, ಕಳಶದ ಹಾರ 200 ರೂ.ನಿಂದ 500 ರೂ., ಹಿರಿಯರ ಪೂಜೆಗೂ ಇದೇ ದರದಲ್ಲಿ ಹಾರಗಳನ್ನು ಸಿದ್ಧಪಡಿಸಲಾಗಿತ್ತು. ದೇಗುಲಗಳಲ್ಲಿನ ದೇವರ ಮೂರ್ತಿಗಳಿಗೆ 500 ರೂ.ನಿಂದ 3 ಸಾವಿರ ರೂ.ವರೆಗೂ ಭಕ್ತರ ಅಭಿರುಚಿಗೆ ತಕ್ಕಂತೆ ಹಾರಗಳನ್ನು ಮಾರಾಟಗಾರರು ತಯಾರಿಸಿದ್ದರು. ಅದರಂತೆಯೇ ಬಹುತೇಕ ಬಿಕರಿಯಾದವು.
ತಲಾ ಒಂದೊಂದು ತೆಂಗಿನಕಾಯಿ 20 ರೂ.ನಿಂದ 40 ರೂ.ವರೆಗೂ ಬಿಕರಿಯಾದವು. ಸೇಬು, ಬಿಕ್ಕೆ ಹಣ್ಣು, ಮೋಸುಂಬಿ, ದಾಳಿಂಬೆ, ಬಾಳೆ ಹಣ್ಣು ಕ್ರಮವಾಗಿ 120ರಿಂದ 140 ರೂ., 80 ರೂ., 200 ರೂ., 80 ರಿಂದ 100 ರೂ.ನಂತೆ ಮಾರಾಟವಾಯಿತು.
ಹಸಿರು ಪಟಾಕಿಗಳ ಕುರಿತು ಒಲವು ಹೆಚ್ಚುತ್ತಿರುವ ಕಾರಣ ಅನೇಕ ನಾಗರಿಕರು ವ್ಯಾಪಾರಸ್ಥರ ಬಳಿ ಕೇಳಿ ಪಡೆದರು. ಒಬ್ಬೊಬ್ಬರು 500 ರೂ.ನಿಂದ 5ಸಾವಿರ ರೂ.ವರೆಗೂ ಖರೀದಿಯಲ್ಲಿ ತೊಡಗಿದರು. ಬಾಕ್ಸ್ ಪಟಾಕಿಗಳು 500 ರೂ.ನಿಂದ 2ಸಾವಿರ ರೂ.ವರೆಗೂ ಬಿಕರಿಯಾದವು.
ಹೂ ಬೆಳೆಗಾರರಲ್ಲಿ ಸಂತಸ: ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆ ವಿವಿಧ ಬಗೆಯ ಪುಷ್ಪಗಳ ರಾಶಿಯಿಂದ ಭರ್ತಿಯಾಗಿತ್ತು. ಬೆಳಗ್ಗೆ 11ರಿಂದ ಸಂಜೆ 4ರವರೆಗೂ ಖರೀದಿಗೆ ಅನೇಕರು ಮುಗಿಬಿದ್ದರು. ಗುಣಮಟ್ಟದ ಹಳದಿ, ಬಿಳಿ, ಕೆಂಪು, ನೇರಳೆ ವರ್ಣದ ಸೇವಂತಿ 5ರಿಂದ 6 ಮಾರು ಪುಷ್ಪಕ್ಕೆ ತಲಾ 1ಸಾವಿರ ರೂ.ನಂತೆ ಮಾರಾಟವಾದವು. 7ರಿಂದ 8 ಮಾರು ಕನಕಾಂಬರ ಮತ್ತು ಮಲ್ಲಿಗೆ ಇದೇ ದರಕ್ಕೆ ಖರೀದಿಯಾಗುತ್ತಿದ್ದವು. ವಿವಿಧ ಬಣ್ಣಗಳ ಗುಲಾಬಿ (ಬಟನ್ಸ್) ಹೂಗಳು ಕೆ.ಜಿಗೆ 400 ರೂ.ನಿಂದ 500 ರೂ.ವರೆಗೂ ಬಿಕರಿಯಾದವು. ಉತ್ತಮ ದರಕ್ಕೆ ಮಾರಾಟವಾದ್ದರಿಂದ ಆಯುಧಪೂಜೆ, ವಿಜಯದಶಮಿಯಂತೆ ದೀಪಾವಳಿ ಹಬ್ಬವೂ ಹೂ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿತು.