ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳಿದ್ದವರ ಮನೆಗಳಲ್ಲಿ ಕಳವು

house-Theft
Published on

ಮೈಸೂರು: ದೀಪಾವಳಿ ಹಬ್ಬಕ್ಕಾಗಿ ಅನ್ಯ ಊರಿಗೆ ತೆರಳಿದ್ದವರ ಮನೆಗಳಲ್ಲಿ ಕಳ್ಳತನ ನಡೆದಿದ್ದು, ಖದೀಮರು ದೋಚಿರುವ ಬಗ್ಗೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರ 4ನೇ ಹಂತದ ನಿವಾಸಿ ಎಂ.ಯಶವಂತ ಅವರು ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದರು. ಮರುದಿನ ಅವರ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಮನೆಯವರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.

ಬೆಂಗಳೂರಿನಿಂದ ಬಂದು ಮನೆಯನ್ನು ಪರಿಶೀಲಿಸಿದಾಗ 1.30 ಲಕ್ಷ ನಗದು ಹಾಗೂ 10 ಸಾವಿರ ರೂ. ಮೌಲ್ಯದ ಬೆಳ್ಳಿ ಪದಾರ್ಥ ಕಳ್ಳತನವಾಗಿರುವುದು ಗೊತ್ತಾಗಿದೆ.

ಖದೀಮರು ಚೂಪಾದ ಆಯುಧದಿಂದ ಬೀಗ ಮೀಟಿ, ಕಳ್ಳತನ ಮಾಡಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೀತಿ ಲೇಔಟ್ ನಿವಾಸಿ ಪರಮೇಶ್ ಅವರ ಮನೆಯ ಬೀಗ ಮುರಿದು 3.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 90 ಸಾವಿರ ರೂ. ಮೌಲ್ಯದ ಬೆಳ್ಳಿ ಪದಾರ್ಥಗಳು ಹಾಗೂ 10 ಸಾವಿರ ನಗದು ಕಳವು ಮಾಡಿದ್ದಾರೆ.

ಪತ್ನಿ, ಪುತ್ರ ಹಾಗೂ ಸೊಸೆ ಆಂಧ್ರಕ್ಕೆ ಹೋಗಿರುವುದರಿಂದ ಪರಮೇಶ್ ಅವರು ಮನೆಗೆ ಬೀಗ ಹಾಕಿಕೊಂಡು ಹಬ್ಬಕ್ಕೆಂದು ಸ್ವಗ್ರಾಮಕ್ಕೆ ತೆರಳಿದ್ದರು.

ವಾಪಸ್ ಬಂದು ನೋಡಿದಾಗ ಮುಂಬಾಗಿಲಿನ ಬೀಗ ಮುರಿದಿತ್ತು. ಒಳಹೋಗಿ ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಸರಸ್ವತಿಪುರಂ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net