

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಐತಿಹಾಸಿಕ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೀಪಾವಳಿ ದೀವಟಿಗೆ ಉತ್ಸವ ಕ್ಷಣಗಣನೆ ಆರಂಭವಾಗಲಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿವೆ.
ದೀವಟಿಗೆ ಉತ್ಸವವು ಕರೊನಾ ಹಿನ್ನೆಲೆಯಲ್ಲಿ ಕಳೆದ ಎರಡೂ ವರ್ಷಗಳಿಂದ ದೇವಸ್ಥಾನದ ಆವರಣದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು. ಈ ಬಾರಿ ಅದ್ದೂರಿ ಆಚರಣೆಗೆ ತಾಲೂಕು ಆಡಳಿತ ಹಾಗೂ ಸ್ಥಳೀಯ ಭಕ್ತಾದಿಗಳು ತೀರ್ಮಾನಿಸಿದ್ದಾರೆ.
ದೀಪಾವಳಿಯ ಎರಡನೇ ದಿನವಾದ ಮಂಗಳವಾರ ಇಲ್ಲಿನ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ಮುಂಜಾನೆ 5 ಗಂಟೆಯಿಂದ ಮಧಾಹ್ನ 1.30ರವರೆಗೆ ವಿಶೇಷ ಪೂಜೆ ನಡೆಯಲಿದೆ. ಬಳಿಕ ಸೂರ್ಯ ಗ್ರಹಣ ಇರುವುದರಿಂದ ಮಧ್ಯಾಹ್ನ 2ರಿಂದ ಸಂಜೆ 6 ಗಂಟೆಯವರೆಗೆ ಬೆಟ್ಟದ ದೇವಸ್ಥಾನದಲ್ಲಿ ಯಾವುದೇ ಪೂಜೆಗಳು ಇರುವುದಿಲ್ಲ. ಹಾಗಾಗಿ ಈ ವೇಳೆ ಭಕ್ತಾದಿಗಳು ಬಾರದಂತೆ ಸೂಚಿಸಲಾಗಿದೆ.
ಪಂಚಿನ ಮೆರವಣಿಗೆ: ಮಂಗಳವಾರ ರಾತ್ರಿ ದೇವಸ್ಥಾನದಲ್ಲಿನ ಇರುವ ಬೆಳ್ಳಿ ಬಸಪ್ಪ, ಗಣಪತಿ ಮತ್ತು ಭ್ರಮರಾಂಭ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಗಳನ್ನು ಬೆಟ್ಟದ ಮೇಲಿನ ದೇವಸ್ಥಾನಕ್ಕೆ ತೆಗೆದುಕೊಂಡ ಹೋಗಲಾಗುತ್ತದೆ. ಬಳಿಕ ಬುಧವಾರ ಬೆಳಗ್ಗೆ ಉತ್ಸವ ಮೂರ್ತಿಗಳಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ನಡೆಯಲಿದೆ. ನಂತರ ಉತ್ಸವ ಮೂರ್ತಿಗಳ ಪಂಚಿನ ಮೆರವಣಿಗೆ ಆರಂಭವಾಗಲಿದೆ.
ಭಕ್ತರು ತಮ್ಮ ಮನೆಯಲ್ಲಿ ಸಿದ್ಧಪಡಿಸಿ ತಂದ ಪಂಜಿನೊಂದಿಗೆ (ದೀವಟಿಗೆ) ಬೆಟ್ಟದಪುರ, ಬೆಟ್ಟದತುಂಗ, ಹರದೂರು, ಡಿ.ಜಿ ಕೊಪ್ಪಲು, ಬಾರಸೇ, ಕುಡುಕೂರು, ಕೂರಗಲ್ಲು ಸೇರಿದಂತೆ ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ಮೆರವಣಿಗೆ ಮಾಡಿ ಬಳಿಕ ಮೂಲ ಸ್ಥಾನವಾದ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅಲ್ಲದೇ ಈ ವೇಳೆ ಬೆಟ್ಟದ ಸುತ್ತಮುತ್ತಲಿನ ಗ್ರಾಮದಲ್ಲಿ ಪ್ರತಿ ಮನೆ ಮುಂದೆ ಹಸಿರು ಚಪ್ಪರ ಹಾಕಿರುತ್ತಾರೆ.
ಬೆಟ್ಟವೇರುವ ಭಕ್ತರು: ಕಳೆದ ಎರಡು ವರ್ಷಗಳಿಂದ ದೀವಟಿಗೆ ಉತ್ಸವ ಸರಳವಾಗಿ ನಡೆದರು ಸಹ ಸಾವಿರಾರೂ ಯುವಕರು ಹಾಗೂ ಭಕ್ತಾದಿಗಳು ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಜೋರು ಮಳೆಯ ನಡುವೆಯು ಬೆಟ್ಟವನ್ನು ಹತ್ತಿದ್ದರು. ಈ ಬಾರಿ ಉತ್ಸವ ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಿದ್ದು, ನಿರೀಕ್ಷೆಗೂ ಮೀರಿ ಹೆಚ್ಚಿನ ಭಕ್ತಾದಿಗಳು ಆಗಮಿಸಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಹಿನ್ನೆಲೆ: ಮಹಾಲಯ ಅಮಾವಾಸ್ಯೆ ದಿನದಂದು ಶ್ರೀಮಲ್ಲಿಕಾರ್ಜುನ ಸ್ವಾಮಿ ಗಿರಿಜಾ ದೇವಿಯನ್ನು ನೋಡುವ ಶಾಸ್ತ್ರ, ದೀಪಾವಳಿಯ ಬಲಿಪಾಡ್ಯಮಿ ದಿನದಂದು ಮಲ್ಲಿಕಾರ್ಜುನ ಸ್ವಾಮಿ ಹಾಗೂ ಗಿರಿಜಾ ದೇವಿಯ ವೀಳ್ಯಶಾಸ್ತ್ರ ನಡೆಯುತ್ತದೆ. ನಂತರ ಬೆಳ್ಳಿ ಬಸಪ್ಪ, ಗಿರಿಜಾದೇವಿ ಸಮೇತ ಮಲ್ಲಿಕಾರ್ಜುನಸ್ವಾಮಿ ಉತ್ಸವ, ದೀವಟಿಗೆಯೊಂದಿಗೆ ನಡೆಯುತ್ತದೆ. ಫೆಬ್ರವರಿಯ ಹುಣ್ಣಿಮೆ ದಿನದಂದು ದೇವಸ್ಥಾನ ಆವರಣದಲ್ಲಿ ಮಲ್ಲಿಕಾರ್ಜುನಸ್ವಾಮಿ ಮತ್ತು ಗಿರಿಜಾ ದೇವಿಯ ವಿವಾಹ ಮಹೋತ್ಸವ ನೆರವೇರಲಿದೆ. ಮರು ದಿನ ನಡೆಯುವುದು ರಥೋತ್ಸವ. ಈ ರೀತಿ ಬೆಟ್ಟದಪುರದ ಹಬ್ಬಕ್ಕೆ ಐತಿಹಾಸಿಕ ಹಿನ್ನೆಲೆ ಇದೆ.
ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ಮಂಗಳವಾರ ಬೆಳಗ್ಗೆ 5ರಿಂದ ಮಧಾಹ್ನ ಒಂದೂವರೆ ಗಂಟೆಯವರೆಗೆ ಮಾತ್ರ ವಿಶೇಷ ಪೂಜೆಗಳು ನಡೆಯುತ್ತವೆ. ಬಳಿಕ ಸೂರ್ಯ ಗ್ರಹಣ ಇರುವುದರಿಂದ ಸಂಜೆ 6 ಗಂಟೆಯವರೆಗೆ ಬೆಟ್ಟದ ದೇವಸ್ಥಾನದಲ್ಲಿ ಸೇರಿದಂತೆ ಯಾವುದೇ ದೇವಸ್ಥಾನಗಳಲ್ಲಿ ಪೂಜೆಗಳು ಇರುವುದಿಲ್ಲ.
ಕೃಷ್ಣಪ್ರಸಾದ್, ಅರ್ಚಕರು, ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ದೇವಸ್ಥಾನ.