

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಜ. 12ರಿಂದ ಐದು ದಿನಗಳ ಕಾಲ ನಡೆಯುವ 29ನೇ ರಾಷ್ಟ್ರೀಯ ಯುವ ಜನೋತ್ಸವ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರದಲ್ಲಿ ಭರದ ಸಿದ್ಧತೆಗಳು ನಡೆದಿವೆ.
ಯುವ ಜನೋತ್ಸವಕ್ಕೆ ವಿವಿಧ ರಾಜ್ಯಗಳಿಂದ ಸಾವಿರಾರು ಜನರು ಆಗಮಿಸುವ ಹಿನ್ನೆಲೆಯಲ್ಲಿ ಇಡೀ ನಗರವನ್ನು ಸ್ವಚ್ಛವಾಗಿಡುವುದರ ಜತೆಗೆ ಅಂದವಾಗಿ ಕಾಣಿಸಲು ಎಲ್ಲ ರೀತಿಯ ಪ್ರಯತ್ನದಲ್ಲಿ ಜಿಲ್ಲಾಡಳಿತ ತೊಡಗಿದೆ. ಇದರ ಭಾಗವಾಗಿ ಈಗಾಗಲೇ ಕೆಸಿಡಿ, ಸಪ್ತಾಪುರ, ಕರ್ನಾಟಕ ವಿಶ್ವ ವಿದ್ಯಾಲಯ ಸೇರಿ ಇತರ ಕಡೆಗಳಲ್ಲಿನ ಗೋಡೆಗಳ ಮೇಲೆ ಅತ್ಯಾಕರ್ಷಕ ಚಿತ್ರಗಳನ್ನು ಬಿಡಿಸುವ ಕೆಲಸ ಆರಂಭವಾಗಿದೆ.
ನಗರದ ಬಹುತೇಕ ಬಡಾವಣೆಗಳ ಜನರಿಗೆ ಕೆಸಿಡಿ ಮಧ್ಯದ ಸ್ಥಳವಾಗಿದ್ದರಿಂದ ಈ ಮೈದಾನದಲ್ಲೇ ಮುಖ್ಯ ವೇದಿಕೆ ನಿರ್ಮಿಸಲಾಗುತ್ತಿದೆ. ಹೀಗಾಗಿ ಕೆಸಿಡಿಗೆ ಆಗಮಿಸುವ ರಸ್ತೆಗಳ ಜತೆಗೆ ಕಾಲೇಜು ಆವರಣದಲ್ಲಿನ ರಸ್ತೆಗಳ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ. ಇಡೀ ನಗರ ಸೌಂದರ್ಯಿಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ನಗರ ಒಂದು ರೀತಿ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿರುವುದು ವಿಶೇಷ.
ಚುನಾವಣೆ ಹೊಸ್ತಿಲಲ್ಲೇ ಯುವ ಜನೋತ್ಸವ ನಡೆಸಯುತ್ತಿರುವುದು ಒಂದೆಡೆಯಾದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಿ ಉತ್ಸವಕ್ಕೆ ಚಾಲನೆ ನೀಡುವುದರಿಂದ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆಯೋಜನೆಯಲ್ಲಿ ಒಂದಿಷ್ಟೂ ಲೋಪ ಆಗದಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಈಗಾಗಲೇ ಸ್ಪಷ್ಟ ಸಂದೇಶ ನೀಡಿದ್ದು, ಅಧಿಕಾರಿಗಳು ಹಲಗು-ರಾತ್ರಿ ಎನ್ನದೆ ಎಲ್ಲ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಧಾರವಾಡ ಜಿಲ್ಲಾ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿ ಅನೇಕ ರೀತಿಯ ಬೃಹತ್ ಕಾರ್ಯಕ್ರಮಗಳು ನಡೆದಾಗ ಇಷ್ಟು ಪ್ರಮಾಣದಲ್ಲಿ ನಗರ ಸೌಂದರ್ಯ, ದೀಪಾಲಂಕಾರಕ್ಕೆ ಆದ್ಯತೆ ನೀಡಿರಲಿಲ್ಲ. ಆದರೆ ಈಗ ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಮಾಡಿದ್ದು ಜನರಲ್ಲೂ ಆಶ್ಚರ್ಯ ಮೂಡಿಸಿದೆ.
ಯುವ ಜನೋತ್ಸವ ಹಿನ್ನೆಲೆಯಲ್ಲಿ ಎನ್‌ಟಿಟಿಎಫ್‌ನಿಂದ ಜುಬಿಲಿ ವೃತ್ತ ಹಾಗೂ ಕೆಸಿಡಿವರೆಗೂ ಸುಂದರವಾಗಿ ದೀಪಾಲಂಕಾರ ಮಾಡಲಾಗಿದೆ. ಈಗಾಗಲೇ ವಿದ್ಯುತ್ ದೀಪಗಳು ಝಗಮಗಿಸುತ್ತಿದ್ದರೆ, ಇನ್ನು ಕೆಲ ಕಡೆಗಳಲ್ಲಿ ಅಂತಿಮ ಹಂತದ ಕಾರ್ಯ ನಡೆಯುತ್ತಿದೆ.