

ಮೈಸೂರು: ಇದೇ ಮೊದಲ ಬಾರಿಗೆ ದಸರಾ ದೀಪಾಲಂಕಾರದ ಬೆಳಕಿನಲ್ಲಿ ಗಜಪಡೆಯ ತಾಲೀಮು ನಡೆಯಲಿದ್ದು, ಇಂದು(ಸೆ.23ರಂದು) ಚಾಲನೆ ದೊರೆಯಲಿದೆ.
ದಸರಾ ಜಂಬೂ ಸವಾರಿ (ಅ.5ರಂದು)ದಿನ ಅಂಬಾರಿಗೆ ಸಂಜೆ 5.40ಕ್ಕೆ ಪುಷ್ಪಾರ್ಚನೆ ಮಾಡಲು ಮುಹೂರ್ತ ನಿಗದಿ ಮಾಡಲಾಗಿದೆ. ಹೀಗಾಗಿ ಅಂದು ದೀಪಾಲಂಕಾರದ ನಡುವೆ ಜಂಬೂ ಸವಾರಿ ರಾಜಬೀದಿಯಲ್ಲಿ ಸಾಗಬೇಕಿದೆ. ಇದಕ್ಕೆ ಆನೆಗಳು ಹೊಂದಿಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈ ತಾಲೀಮು ನಡೆಸಲಿದೆ.
ಅರಮನೆ ದ್ವಾರದಿಂದ ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆ, ಆಯುರ್ವೇದ ವೃತ್ತ, ಆರ್‌ಎಂಸಿ ವೃತ್ತ, ಜಂಬೂಬಜಾರ್, ಹೈವೆ ವೃತ್ತದ ಮೂಲಕ ಬನ್ನಿಮಂಟಪದ ಪಂಜಿನ ಕವಾಯತ್ (5 ಕಿ.ಮೀ.ವರೆಗೆ) ಮೈದಾನದವರೆಗೆ ದೀಪಾಲಂಕಾರ ಮಾಡಲಾಗುತ್ತಿದೆ. ನಾಳೆಯಿಂದ(ಸೆ.23) ದೀಪಾಲಂಕಾರಕ್ಕೂ ಚಾಲನೆ ಸಿಗಲಿದ್ದು, ಬಣ್ಣ ಬಣ್ಣದ ಬೆಳಕಿನ ನಡುವೆ ಆನೆಗಳು ಹೆಜ್ಜೆ ಹಾಕಲಿವೆ.
ಶುಕ್ರವಾರ ಸಂಜೆ 5.30ಕ್ಕೆ ಗೋಪಾಲಸ್ವಾಮಿ ಅಥವಾ ಭೀಮಾ ಆನೆಗೆ ಗಾದಿ, ನಮ್ದಾದೊಂದಿಗೆ ಮರದ ಅಂಬಾರಿ ಕಟ್ಟಿ ತಾಲೀಮಿಗೆ ಕರೆದೊಯ್ಯಲಾಗುತ್ತದೆ. ಹೀಗಾಗಿ ಮರದ ಅಂಬಾರಿಗೆ ಮಾರ್ಗದುದ್ದಕ್ಕೂ ಎಲ್ಲದರೂ ದೀಪಾಲಂಕಾರದ ವಿದ್ಯುತ್ ದೀಪಗಳು ತಾಗುತ್ತವೆಯೇ ಎಂದು ಪರಿಶೀಲಿಸಲು ಅರಣ್ಯ ಇಲಾಖೆಯು ಸೆಸ್ಕ್ ಹಾಗೂ ಪಾಲಿಕೆಯ ಸಿಬ್ಬಂದಿ ತಂಡವನ್ನು ಆಹ್ವಾನಿಸಿದೆ.
ಅಂತಿಮ ಸಿಡಿಮದ್ದು ತಾಲೀಮು
ಗಜಪಡೆಗೆ ಸೆ.23ರಂದು ಮಧ್ಯಾಹ್ನ 12ಕ್ಕೆ ಅಂತಿಮ ಹಂತದ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಗುತ್ತದೆ. ಮೊದಲ ತಾಲೀಮು ವರಹಾ ದ್ವಾರದ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ನಡೆದಿತ್ತು. ಅರಮನೆಯ ಕಾಂಪೌಂಡ್ ಗೋಡೆ ಬಿರುಕು ಬಿಡುತ್ತದೆ ಎಂಬ ಆತಂಕದಿಂದ ದಸರಾ ವಸ್ತು ಪ್ರದರ್ಶನದ ಪಾರ್ಕಿಂಗ್ ಸ್ಥಳದಲ್ಲಿ 2ನೇ ಹಂತದ ಸಿಡಿಮದ್ದು ತಾಲೀಮು ನಡೆಸಲಾಗಿತ್ತು. ಅಂತಿಮ ಹಂತದ ಸಿಡಿಮದ್ದು ತಾಲೀಮು ಬಹುತೇಕ ದಸರಾ ವಸ್ತುಪ್ರದರ್ಶನ ಪಾರ್ಕಿಂಗ್ ಸ್ಥಳದಲ್ಲೇ ನಡೆಯುವ ಸಾಧ್ಯತೆ ಇದೆ.