ದೀಪ ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ

Marketing
Published on

ಚಿತ್ರದುರ್ಗ: ದೀಪಾವಳಿ ಹಬ್ಬದ ಅಂಗವಾಗಿ ದೀಪ ಸಂಜೀವಿನಿ ಕಾರ್ಯಕ್ರಮಕ್ಕೆ ಜಿಪಂ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ ಗುರುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಮಹಿಳಾ ಸ್ವ-ಸಹಾಯ ಸಂಘಗಳು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ದೀಪಾವಳಿ ಹಬ್ಬದ ಸಂದರ್ಭ ಸದ್ಬಳಕೆ ಮಾಡಿಕೊಳ್ಳಲೆಂದು ಮಾರಾಟ ಮೇಳಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪಗಳ ಹಬ್ಬವೇ ದೀಪಾವಳಿ. ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯೆಯರು ತಮ್ಮ ಕೈಚಳಕ, ಪರಿಶ್ರಮ ಹಾಗೂ ಸೃಜನಶೀಲತೆಯಿಂದ ವಿವಿಧ ವಿನ್ಯಾಸದ ಆಕರ್ಷಕ ದೀಪಗಳನ್ನು ತಯಾರಿಸಿದ್ದು, ಮಾರುಕಟ್ಟೆ ಒದಗಿಸುವುದು, ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸುವ ಮೂಲಕ ಅವರ ಸ್ವಾವಲಂಬಿ ನಡೆಗಳನ್ನು ಪ್ರೇರೇಪಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣಾ ಘಟಕ, ಮೆದೇಹಳ್ಳಿ ಒನಕೆ ಓಬವ್ವ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ ಸೇರಿ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿದ ಹಣತೆ, ವಿವಿಧ ವಿನ್ಯಾಸದ ಆಕರ್ಷಕ ದೀಪಗಳು, ದೀಪಾವಳಿ ಹಬ್ಬದ ಅಲಂಕಾರಿಕ ವಸ್ತುಗಳು, ಹಪ್ಪಳ, ಉಪ್ಪಿನಕಾಯಿ, ಲಾಡು, ಹೋಳಿಗೆ, ಶೇಂಗಾ ಚಿಕ್ಕಿ ಮತ್ತು ಉಂಡೆ, ಇತರ ತಿನಿಸುಗಳು, ಗಾಣದಿಂದ ತಯಾರಿಸಿದ ಶೇಂಗಾ ಎಣ್ಣೆ, ಜೋಳ-ಸಜ್ಜೆ ರೊಟ್ಟಿ, ಬಟ್ಟೆ, ವ್ಯಾನಿಟಿ ಬ್ಯಾಗ್ ಸೇರಿ ಹಲವು ವಸ್ತುಗಳ ಮಾರಾಟಕ್ಕಾಗಿ ಮಳಿಗೆ ತೆರೆಯಲಾಗಿತ್ತು.

ಗಾಂಧಿವೃತ್ತದ ಉಪಾಧ್ಯಾ ಹೋಟೆಲ್ ಮುಂಭಾಗ ಜಿಪಂ, ತಾಪಂ, ಕೌಶಲಾಭಿವೃದ್ಧಿ, ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿಯಿಂದ ನಡೆದ ಮಾಸಿಕ ಸಂತೆ ವಸ್ತುಗಳ ಪ್ರದರ್ಶನ, ಮಾರಾಟ ಮೇಳ ಜನರನ್ನು ಆಕರ್ಷಿಸಿತು. ಅಣತೆ ಸೇರಿ ಇತರ ವಸ್ತುಗಳು ಸಾರ್ವಜನಿಕರು ಖರೀದಿಸಿದರು.

ಅಭಿಯಾನದ ಕಾರ್ಯಕ್ರಮ ವ್ಯವಸ್ಥಾಪಕ ಯೋಗೇಶ್, ಜಿಲ್ಲಾ ವ್ಯವಸ್ಥಾಪಕರಾದ ಭೋಜರಾಜ, ರಮೇಶ್, ದೇವರಾಜ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net