ದೀಪ ಮನಸ್ಸಿನ ಕತ್ತಲೆ ದೂರಗೊಳಿಸುತ್ತದೆ

DEEPA
Published on


ಯಾದಗಿರಿ: ಕತ್ತಲೆ ಋಣಾತ್ಮಕವಾದರೆ, ಬೆಳಕು ಧನಾತ್ಮಕ. ದೀಪ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬೆಳಕು. ಬೆಳಕು ಜೀವನದ ಅಂಧಕಾರವನ್ನು ತೊಡೆದುಹಾಕುತ್ತದೆ ಎಂದು ಹರಿಹರ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀಸ್ವಾಮಿ ಶಾರದೇಶಾನಂದರು ನುಡಿದರು.

ನಗರದ ಶ್ರೀರಾಮಕೃಷ್ಣಾಶ್ರಮದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಹಿತೋಪದೇಶ ನೀಡಿದ ಅವರು, ಮಾತನಾಡಿ, ದೀಪಕ್ಕೊಂದು ಅಜ್ಞಾತ ಹಾಗೂ ಅಗಾಧ ಶಕ್ತಿಯಿದೆ. ಬೆಳಗುವ ದೀಪ ಮನಸ್ಸಿನ ಕತ್ತಲೆಯನ್ನು ದೂರಗೊಳಿಸುತ್ತದೆ ಮತ್ತು ಎಲ್ಲ ಕಲ್ಮಶಗಳನ್ನೂ ದೂರ ಸರಿಸಿ ಶಾಂತಿ ಮೂಡಿಸುವ ಶಕ್ತಿ ದೀಪಕ್ಕಿದೆ ಎಂದರು.

ದೇವರ ಧ್ಯಾನ, ಪ್ರಾರ್ಥನೆಯಲ್ಲಿ ದೊಡ್ಡ ಶಕ್ತಿಯಿದೆ. ಪ್ರಾರ್ಥನೆಯ ಮೂಲಕ ತನ್ನ ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಶಾಂತಿ, ಸೌಭಾಗ್ಯ ದೊರೆಯುತ್ತದೆ. ಮನೆಯಲ್ಲಿ ದೀಪ ಹಚ್ಚುವುದರಿಂದ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಮಹತ್ವದ ಪ್ರಾಮುಖ್ಯತೆ ಇದೆ. ಯಾವುದೇ ಕಾರ್ಯಕ್ರಮ ಅಥವಾ ಪೂಜಾ ಕೈಂಕರ್ಯಗಳನ್ನು ನಡೆಸಬೇಕಾದರೆ ಆ ಕಾರ್ಯಕ್ರಮ, ಪೂಜೆ ನಡೆಯುವುದು ದೀಪ ಬೆಳಗುವ ಮೂಲಕವೇ ಎಂದು ಹೇಳಿದರು.

ರಾಜ್ಯ ಬಿಜೆಪಿ ಮಾಜಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನೆಯಲ್ಲಿ ದೀಪ ಹಚ್ಚುವುದರಿಂದ ಅಲ್ಲಿನ ವಾತಾವರಣ ಶಾಂತಿ, ನೆಮ್ಮದಿ ಹಾಗೂ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ ಇದು ವೈಜ್ಞಾನಿಕವಾಗಿಯೂ ಧೃಢವಾಗಿದೆ. ದೇಶದಲ್ಲಿ ರಾಮಕೃಷ್ಣಾಶ್ರಮಗಳುವೈಚಾರಿಕ ಪರಂಪರೆಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.

ಆಶ್ರಮದ ಜಿಲ್ಲಾ ಸಂಚಾಲಕ ಪಿ.ವೇಣುಗೋಪಾಲ ಪ್ರಾಸ್ತಾವಿಕ ಮಾತನಾಡಿದರು. ಸಿಂಧನೂರು ಆಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದರು, ಪ್ರಮುಖರಾದ ಸುಭಾಶ್ಚಂದ್ರ ಇದ್ದರು. ಗುರುಪ್ರಸಾದ ವೈದ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net