ದೀಪ ಪ್ರಜ್ವಲನೆಯಿಂದ ಆತ್ಮನಿರ್ಭರ

photos
Published on

ಬೀದರ್: ದೀಪ ಜ್ಞಾನದ ಪ್ರತೀಕವಾಗಿದೆ. ದೀಪ ಬೆಳಗುವುದರಿಂದ ಮನುಷ್ಯರಲ್ಲಿ ಆತ್ಮನಿರ್ಭರತೆಯ ದಿವ್ಯ ಶಕ್ತಿ ಸಹಜವಾಗಿಯೇ ತುಂಬುತ್ತದೆ ಎಂದು ಬೇಮಳಖೇಡ್ ಹಿರೇಮಠದ ಪೂಜ್ಯ ಡಾ. ರಾಜಶೇಖರ ಶಿವಾಚಾರ್ಯರು ಹೇಳಿದರು.

ಇಲ್ಲಿಯ ನೌಬಾದ್ ಹತ್ತಿರದ ಭಾಲ್ಕಿ ರಸ್ತೆಯಲ್ಲಿರುವ ಜ್ಞಾನ ಶಿವಯೋಗಾಶ್ರಮದಲ್ಲಿ ಭಾನುವಾರ ಸಂಜೆ ಏರ್ಪಡಿಸಲಾಗಿದ್ದ ಕಾರ್ತಿಕ ದೀಪೋತ್ಸವದಲ್ಲಿ ಮಾತನಾಡಿ, ಭಾರತೀಯರಿಗೆ ಶ್ರಾವಣದಂತೆ ಕಾರ್ತಿಕ ಮಾಸವೂ ಬಹಳ ಪವಿತ್ರವಾಗಿದೆ. ಸುಂದರ ಹಾಗೂ ಸಮೃದ್ಧ ಜೀವನಕ್ಕಾಗಿ ಕಾರ್ತಿಕ ದೀಪಾರಾಧನೆ ಸನಾತನ ಕಾಲದಿಂದಲೂ ಮಾಡಿಕೊಂಡು ಬರಲಾಗುತ್ತಿದೆ. ಪ್ರಸಕ್ತ ವರ್ಷ ಕರೊನಾ ಮಹಾಮಾರಿ ವಿನಾಶಾರ್ಥವಾಗಿ ಇಲ್ಲಿ ದೀಪೋತ್ಸವ ನಡೆಸಲಾಗಿದೆ ಎಂದರು.

ಮನುಷ್ಯ ಜೀವನದಲ್ಲಿ ಕಷ್ಟ, ಕಾರ್ಪಣ್ಯಗಳು ಬರುವುದು ಸಹಜ. ಹೀಗಾಗಿ ಅವುಗಳೆಲ್ಲವನ್ನೂ ಧೈರ್ಯದಿಂದಲೇ ಎದುರಿಸಬೇಕು. ನಮ್ಮಲ್ಲಿ ಆ ಧೈರ್ಯ ಬರಬೇಕಾದರೆ ಪ್ರತಿಯೊಬ್ಬರೂ ಕಾರ್ತಿಕ ದೀಪಾರಾಧನೆ, ದೀಪೋತ್ಸವ ಆಚರಿಸುವಂತೆ ಕರೆ ನೀಡಿದರು.

ಶ್ರೀಶೈಲ ಶ್ರೀ ಅಕ್ಕಮಹಾದೇವಿ ಚೈತನ್ಯ ಪೀಠದ ಅಧಿಪತಿ, ತಪೋರತ್ನ ಪೂಜ್ಯ ಕರುಣಾದೇವಿ ಮಾತೆ ಸಾನ್ನಿಧ್ಯ, ಮಲ್ಲಿಕಾರ್ಜುನ ಸ್ವಾಮಿ ಧನ್ನೂರ ಅಧ್ಯಕ್ಷತೆ ವಹಿಸಿದ್ದರು. ಕಾಶಿನಾಥ ಶಂಭು, ರೇವಪ್ಪ ಮುದ್ದಾ, ಶಕುಂತಲಾ ತಂಬಾಕೆ, ಡಾ.ಸುಭಾಷ ಪಾಟೀಲ್, ಸಂಗಶೆಟ್ಟಿ ಚಿದ್ರಿ, ಮಾದಪ್ಪ ಭಂಗೂರೆ, ಮಹಾದೇವಿ ಮಠಪತಿ, ಸಂಗಮೇಶ ಬಿರಾದಾರ, ಹಣಮಂತಪ್ಪ ಕಪಲಾಪುರ, ಮಲ್ಲಿಕಾರ್ಜುನ ಶಂಭು, ಶಿವಯ್ಯ ಸ್ವಾಮಿ, ಮಹಾಂತೇಶ ಡೊಂಗರಗಿ, ರಾಜಕುಮಾರ ಮಾಳಗೆ, ಸುರೇಶ ಶಂಭು, ಪ್ರತಾಪ ತಾಂಬಾಕೆ, ಲೋಕೇಶ ಡೊಂಗರಗಿ, ಶಿವರಾಜ ಕೊಳಾರ ಇತರರಿದ್ದರು.

ಗಂಗಾಧರ ಶಾಸ್ತ್ರಿ ಪೌರೋಹಿತ್ಯದಲ್ಲಿ ದೀಪೋತ್ಸವ ಜರುಗಿತು. ಡೊಂಗರಗಿ ಮಂಡಳಿಯಿಂದ ಭಜನೆ ನಡೆಯಿತು. ಕೊಳಾರ್ (ಕೆ), ನೌಬಾದ್, ಧನ್ನೂರ (ಎಚ್), ಬೀದರ್, ಬೇಮಳಖೇಡ್, ಡೊಂಗರಗಿ, ಮಳಚಾಪುರ, ಚಿದ್ರಿ, ಕಮಠಾಣ, ಖೇಣಿರಂಜೋಳ ಇತರೆ ಕಡೆಗಳಿಂದ ಆಗಮಿಸಿದ್ದ ಭಕ್ತರು ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಶೃದ್ಧೆ, ಭಕ್ತಿಯಿಂದ ಪಾಲ್ಗೊಂಡಿದ್ದರು. ದೀಪೋತ್ಸವದಿಂದ ಇಡೀ ಆಶ್ರಮದ ಪರಿಸರ ಆಕರ್ಷಕವಾಗಿ ಝಗಮಗಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net