ದೀನಬಂಧುಗಾಗಿ ಸಾಗರಯಾನ

12rajesh2
Published on

ಚಾಮರಾಜನಗರ: ಅನಾಥ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಗಡಿಜಿಲ್ಲೆಯ ಸಂಸ್ಥೆಗೆ ಬೆಂಬಲ ನೀಡುವ ಸಲುವಾಗಿ ರಾಷ್ಟ್ರಕವಿಯ ಮೊಮ್ಮಗಳು ಏಕಾಂಗಿಯಾಗಿ ಅಟ್ಲಾಂಟಿಕ್ ಸಾಗರವನ್ನು ದಾಟಿ ಸಾಧನೆ ಮಾಡಿದ್ದಾರೆ.

ತಂದೆ-ತಾಯಿ ಇಲ್ಲದ, ಶಿಕ್ಷಣಕ್ಕೆ ಪೂರಕವಾ ವಾತಾವರಣವಿಲ್ಲದ ಮಕ್ಕಳಿಗೆ ಶಿಕ್ಷಣ, ವಸತಿ ನೀಡುತ್ತಿರುವ ಚಾಮರಾಜನಗರದ ದೀನಬಂಧು ಮತ್ತು ಇಂಗ್ಲೆಂಡ್‌ನ ಮಾನಸಿಕ ಆರೋಗ್ಯ ಪ್ರತಿಷ್ಠಾನಕ್ಕೆ ಬೆಂಬಲ ನೀಡುವ ಸಲುವಾಗಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಮೊಮ್ಮಗಳು ಅನನ್ಯ ಪ್ರಸಾದ್ ಏಕಾಂಗಿಯಾಗಿ ಅಟ್ಲಾಂಟಿಕ್ ಸಾಗರ ದಾಟಿದ್ದಾರೆ.

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮಗ ಶಿವಪ್ರಸಾದ್ ಮತ್ತು ಡಾ.ಪೂರ್ಣಿಮಾ ಪುತ್ರಿ ಅನನ್ಯ ಪ್ರಸಾದ್ ಬೆಂಗಳೂರಿನಲ್ಲಿ ಜನಿಸಿದ್ದು, ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ. ಇವರು ಆಫ್ರಿಕಾದ ಕ್ಯಾನರೆ ದ್ವೀಪದಿಂದ ದೋಣಿಯಲ್ಲಿ ಡಿ.11ರಂದು ಯಾನ ಆರಂಭಿಸಿ ಜ.31ಕ್ಕೆ ಪೂರ್ಣಗೊಳಿಸಿದ್ದಾರೆ. ಒಟ್ಟು 52 ದಿನಗಳ ಕಾಲ ಸುಮಾರು 4800 ಕಿ.ಮೀ ದೂರ ಸಮುದ್ರಯಾನ ನಡೆಸಿದ್ದಾರೆ. ತುಂಬಾ ಕಠಿಣವಾದ ಈ ಸಮುದ್ರಯಾನವನ್ನು ದೀನಬಂಧು ಶಾಲೆಗಾಗಿ ನಡೆಸಿರುವುದು ಗಮನಾರ್ಹ.

ಚಾಮರಾಜನಗರದ ರಾಮಸಮುದ್ರದಲ್ಲಿರುವ ದೀನಬಂಧು ಶಾಲೆ 1999ರಲ್ಲಿ ಆರಂಭವಾಯಿತು. ಎಲ್‌ಕೆಜಿಯಿಂದ ಎಸ್‌ಎಸ್‌ಎಲ್‌ಸಿ ಅವರೆಗೂ ಕನ್ನಡ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದ್ದು, ಅನಾಥ ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಮಗ ಜಿ.ಎಸ್.ಜಯದೇವ್ ದೀನಬಂಧು ಸೇವಾ ಟ್ರಸ್ಟ್‌ನ ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಇವರ ತಮ್ಮನ ಮಗಳಾದ ಅನನ್ಯಪ್ರಸಾದ್ ಸಮುದ್ರಯಾನದ ಮೂಲಕ ದೀನಬಂಧು ಶಿಕ್ಷಣ ಸಂಸ್ಥೆಗೆ ಬೆಂಬಲ ನೀಡಿದ್ದಾರೆ.

ಅನನ್ಯ ಸಾಗರಯಾನ ಮಾಡಲು ನಿರ್ಧರಿಸಿದಾಗ ನಮಗೆ ತುಂಬಾ ಆತಂಕವಿತ್ತು. ಕಠಿಣ ಸವಾಲುಗಳಲ್ಲಿ ಹೋಗಬೇಡ ಎಂದು ನಾವು ಹೇಳಿದ್ದೆವು. ಆದರೂ ಅನನ್ಯ ಹಠ ಬಿಡಲಿಲ್ಲ. ಆಗ ಎಲ್ಲರೂ ಅನಿವಾರ್ಯವಾಗಿ ಎಲ್ಲರೂ ಬೆಂಬಲ ನೀಡಲೇಬೇಕಾಯಿತು. 52 ದಿನಗಳ ಏಕಾಂಗಿಯಾಗಿ ಸಮುದ್ರಯಾನದಲ್ಲಿ ಹಲವು ಸವಾಲುಗಳು ಎದುರಾದರೂ ಹೆದರಲಿಲ್ಲ. ಹೆಣ್ಣುಮಕ್ಕಳು ಇದನ್ನು ಸಾಧಿಸಿ ತೋರಿಸಬೇಕೆಂದು ತೊಟ್ಟ ಪಣವನ್ನು ಪೂರ್ಣಗೊಳಿಸಿದಳು.

ಜಿ.ಎಸ್.ಜಯದೇವ್, ಅನನ್ಯ ದೊಡ್ಡಪ್ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net