

ಚಾಮರಾಜನಗರ: ಶಿಕ್ಷಣತಜ್ಞ ದಿ.ಕೆ.ಸಿ.ರಂಗಯ್ಯ ಅವರು ಬಡವರು, ದೀನದಲಿತರ ಪಾಲಿನ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದು ಹಿರಿಯ ದಲಿತ ಮುಖಂಡ ವೆಂಕಟರಮಣಸ್ವಾಮಿ(ಪಾಪು) ಹೇಳಿದರು.
ನಗರದ ಬಿ.ರಾಚಯ್ಯ ಜೋಡಿರಸ್ತೆಯ ಆದಿಕರ್ನಾಟಕ ವಿದ್ಯಾರ್ಥಿನಿಲಯದ ಆವರಣದಲ್ಲಿ
ದಿ.ಕೆ.ಸಿ.ರಂಗಯ್ಯ ಅವರ 17 ನೇ ಪುಣ್ಯಸ್ಮರಣೆ ಅಂಗವಾಗಿ ದಿ.ಕೆ.ಸಿ.ರಂಗಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಕೆ.ಸಿ.ರಂಗಯ್ಯ ಅವರು ನಗರದಲ್ಲಿ ಹಲವಾರು ವರ್ಷಗಳ ಹಿಂದೆ ವಿದ್ಯಾರ್ಥಿ ನಿಲಯ, ಉಪಾಧ್ಯಾಯರ ಪ್ರಶಿಕ್ಷಣ ಸಂಸ್ಥೆ ತೆರೆದು, ಬಡವರು, ದೀನದಲಿತರು ಗುಣಮಟ್ಟದ ಶಿಕ್ಷಣ ಪಡೆಯುವುದಕ್ಕೆ ಕಾರಣರಾದರು.
ಅವರ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ನೂರಾರು ಮಂದಿ ಶಿಕ್ಷಕರು ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರು ಕೆ.ಸಿ.ರಂಗಯ್ಯ ಅವರ ಮಾರ್ಗದರ್ಶನದಲ್ಲಿ ನಡೆಯುವಂತಾಗಬೇಕು ಎಂಬ ಆಶಯ ವ್ಯಕ್ತ ಪಡಿಸಿದರು ಎಂದರು. ಸಾಹಿತಿ ಡಾ.ಎಂ.ಶಿವಕುಮಾರ್ ಮಾತನಾಡಿ, ಕೆಸಿಆರ್ ತಮ್ಮ 60 ವರ್ಷದ ಜೀವನವನ್ನು ಶಿಕ್ಷಣಕ್ಕೆ ಮುಡುಪಾಗಿಟ್ಟಿದ್ದರು.ಪರೋಪಕಾರವೇ ಅವರ ಜೀವನದ ದ್ಯೇಯವಾಗಿತ್ತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹಾದಿಯಲ್ಲಿ ಕೆ ಸಿ ರಂಗಯ್ಯ ಅವರ ಸಮಾಜಮುಖಿ ಕಾರ್ಯ ಸಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಸಿಆರ್ ಆಭಿಮಾನಿಗಳ ಸಂಘದ ಅಧ್ಯಕ್ಷ ಆಲೂರು ಆರ್.ಮಹದೇವಯ್ಯ, ಜನಹಿತಾಶಕ್ತಿ ಹೋರಾಟಸಮಿತಿ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ಬ್ಯಾಡಮೂಡ್ಲು ಬಸವಣ್ಣ, ಸಿದ್ದಾರ್ಥ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕಾಗಲವಾಡಿ ಸಿ.ರಂಗಸ್ವಾಮಿ, ಶಿಕ್ಷಕ ಕೃಷ್ಣಮೂರ್ತಿ, ಪ್ರಭಾಕರ್, ಕೆಸಿಆರ್ ಕುಟುಂಬದ ಶೀಲಾ, ಚಿಕ್ಕಣ್ಣ ಇತರರಿದ್ದರು.