ದೀನ-ದಲಿತರು, ಬಡವರ ಜೀವನಕ್ಕೆ ದಾರಿ ಮಾಡಿಕೊಟ್ಟರು

ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ ಜಯಂತಿ ಅಂಗವಾಗಿ ಪುರಸಭೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ, ಜಮಾಲುದ್ದೀನ್, ಮಂಜುನಾಥ್, ರತ್ನಾ, ಸೌಮ್ಯಾ, ಲೋಹಿತ್, ಪ್ರಸನ್ನ, ಸಲ್ಮಾನ್, ಇತರರಿದ್ದರು.
20blrp2
Published on

ಬೇಲೂರು: ದೇಶದಲ್ಲೇ ಪ್ರಥಮವಾಗಿ ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಹಿಂದುಳಿದವರು, ದೀನ ದಲಿತರು ಹಾಗೂ ಬಡವರ ಜೀವನಕ್ಕೆ ದಾರಿ ಮಾಡಿಕೊಟ್ಟವರು ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.


ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 108ನೇ ಜಯಂತಿ ಅಂಗವಾಗಿ ಭಾನುವಾರ ಪುರಸಭೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.


ಅಧಿಕಾರ ಇದ್ದಾಗ ಏನಾದರೂ ಉತ್ತಮ ಕೆಲಸ ಮಾಡಬೇಕು ಎಂಬುದನ್ನು ಜನತೆಗೆ ತೋರಿಸಿಕೊಟ್ಟವರೆ ದೇವರಾಜ ಅರಸು ಅವರು. ಅವರು ಹಿಂದುಳಿದ ಸಮಾಜದಲ್ಲಿ ಹುಟ್ಟಿ ಅನುಭವಿಸಿದ ನೋವನ್ನು ಬೇರೆಯವರು ಅನುಭವಿಸಬಾರದು ಎಂಬ ಉದ್ದೇಶದಿಂದ ಮಲ ಹೊರುವ ಪದ್ಧತಿ, ಜೀತ ಪದ್ಧತಿ ನಿಷೇಧ, ಭಾಗ್ಯಜ್ಯೋತಿ ಯೋಜನೆಯೊಂದಿಗೆ ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದರು. ಸಾಮಾಜಿಕವಾಗಿ ಹಿಂದುಳಿದ ಮತ್ತು ತುಳಿತಕ್ಕೊಳಗಾದವರ ಜೀವನ ಬದಲಾವಣೆಗೆ ಶಿಕ್ಷಣ ಕಾರಣ ಎಂಬುದನ್ನು ಅರಿತು ವಿದ್ಯೆ, ಉದ್ಯೋಗದಲ್ಲಿ ಮೀಸಲಾತಿ, ಸೌಲಭ್ಯಗಳನ್ನು ಒದಗಿಸಲು ಹಿಂದುಳಿದ ವರ್ಗಗಗಳ ಆಯೋಗ ರಚಿಸಿ ಹಿಂದುಳಿದವರ ಜೀವನ ಬದಲಾವಣೆಗೆ ಶ್ರಮಿಸಿದ ಮಹಾನ್ ಸಾಧಕರು ಎಂದು ಬಣ್ಣಿಸಿದರು.


ಪುರಸಭೆ ಸದಸ್ಯ ಜಮಾಲುದ್ದೀನ್ ಮಾತನಾಡಿ, ಡಿ.ದೇವರಾಜ ಅರಸು ಅವರು, ಉಳುವವನೇ ಭೂಮಿಯ ಒಡೆಯ ಕಾಯ್ದೆಯನ್ನು ಎಂಬುದನ್ನು ಜಾರಿಗೆ ತರುವ ಮೂಲಕ ಬಡವರು, ನಿರ್ಗತಿಕರ ಹಾಗೂ ಕೂಲಿ ಕಾರ್ಮಿಕರಿಗೆ ಆಶ್ರಯ ನೀಡಿದರು. ಜತೆಗೆ ದೊಡ್ಡ ಹುದ್ದೆಯಲ್ಲಿದ್ದರೂ ಆಸ್ತಿ ಅಂತಸ್ತು ಎನ್ನದೆ ನೇರವಾಗಿ ಆಡಳಿತ ನಡೆಸಿದ ಧೀಮಂತರಾಗಿದ್ದರು. ಅವರು ಹಾಕಿಕೊಟ್ಟ ರಾಜಕೀಯ ನಡೆ ಇಂದಿನ ರಾಜಕೀಯ ನಾಯಕರು ತಮ್ಮ ರಾಜಕೀಯ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಹೇಳಿದರು.


ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಸದಸ್ಯರಾದ ರತ್ನಾ, ಸೌಮ್ಯಾ, ಆರೋಗ್ಯಾಧಿಕಾರಿ ಲೋಹಿತ್, ಕಂದಾಯಾಧಿಕಾರಿ ಪ್ರಸನ್ನ, ಸಿಬ್ಬಂದಿ ಸಲ್ಮಾನ್, ಚೇತನ್, ಪೃಥ್ವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net