ದೀನ ದಯಾಳ್ ಉಪಾಧ್ಯಾಯ ವಿದ್ಯಾರ್ಥಿನಿಲಯ ನಿರ್ಮಾಣ

RAM_4269
Published on

ಮೈಸೂರು: ಆರ್ಥಿಕವಾಗಿ ಹಿಂದುಳಿದ, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು.
ಮಾನಸಗಂಗೋತ್ರಿಯ ವಿಲೇಜ್ ಹಾಸ್ಟೆಲ್ ಹಿಂಭಾಗ ನಿರ್ಮಿಸಲಾಗುತ್ತಿರುವ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುವ ಯೋಜನೆಗೆ ಅನುಮತಿ ಕೊಟ್ಟಿತ್ತು. ಮೈಸೂರು ವಿವಿಯ 4 ಎಕರೆ ಜಾಗ ನೀಡಿದ್ದು, ಸರ್ಕಾರ 82.56 ಕೋಟಿ ರೂ. ಅನುದಾನ ನೀಡಿದೆ. ಮೌಲ್ಯಮಾಪನ ಕೇಂದ್ರದ ಪಕ್ಕ ಮತ್ತು ಹಿಂಭಾಗದ ಜಾಗದಲ್ಲಿ 500 ಪುರುಷರು, 500 ಮಹಿಳೆಯರ ವಸತಿ ಸೌಲಭ್ಯವುಳ್ಳ ಹಾಸ್ಟೆಲ್ ನಿರ್ಮಾಣಗೊಳ್ಳುತ್ತಿದೆ ಎಂದರು.
ಮೈಸೂರು ವಿವಿ ಸಿಂಡಿಕೇಟ್ ಸದಸ್ಯೆ ಡಾ.ಚೈತ್ರಾ ನಾರಾಯಣ ಅವರು, ಮಹಿಳೆಯರ ಹಾಸ್ಟೆಲ್‌ನಲ್ಲಿ ಶೌಚಗೃಹ ವ್ಯವಸ್ಥೆ ಸರಿ ಇಲ್ಲ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಜೆ.ಕೆ. ಟೈರ್ಸ್‌ ನೆರವಿನ ಮೂಲಕ ಈಗ ಶೌಚಗೃಹ ನಿರ್ಮಾಣ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಉದ್ಘಾಟಿಸಲಾಗುತ್ತದೆ ಎಂದು ವಿವರಿಸಿದರು.
ಕೆಲವು ಹಾಸ್ಟೆಲ್‌ಗಳಲ್ಲಿ ಕೊಳೆತ ತರಕಾರಿ ಬಳಸಲಾಗುತ್ತಿದೆ. ಇಲಿ, ಜಿರಳೆ ಓಡಾಡುತ್ತವೆ. ಅಶುಚಿತ್ವದ ಬಗ್ಗೆ ದೂರುಗಳು ಬಂದಾಗ ಕುಲಪತಿಗಳ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮಾಡಿದ್ದೇನೆ ಎಂದು ಭರವಸೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಹಾಸ್ಟೆಲ್‌ಗಳಲ್ಲಿ ಇರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಅದಕ್ಕಾಗಿ ವಿಶೇಷ ಅನುದಾನದ ಅಗತ್ಯವೂ ಇದೆ ಎಂದು ಹೇಳಿದರು.
ನಗರಪಾಲಿಕೆ ಸದಸ್ಯೆ ವೇದಾವತಿ, ಮೈಸೂರು ವಿವಿ ಮುಖ್ಯ ಇಂಜಿನಿಯರ್ ಪ್ರತಾಪ್, ಎಸ್ಟೇಟ್ ಆಫೀಸರ್ ಪ್ರೊ.ಎಸ್.ಸಿ.ಜಯರಾಮ್, ಮೈಸೂರು ವಿವಿ ರಾಸೇಯೋ ಸಂಯೋಜಕ ಸುರೇಶ್, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಎಇಇ ಬಾಲಾಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net