

ಕೊಳ್ಳೇಗಾಲ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಹಾರಾಷ್ಟ್ರ ನಾಗಪುರ ದೀಕ್ಷಾ ಭೂಮಿ ಯಾತ್ರೆಗೆ ಪ್ರವಾಸ ಕೈಗೊಂಡಿರುವ ಎಲ್ಲ ಯಾತ್ರಾರ್ಥಿಗಳ ಬಸ್ ಪ್ರಯಾಣಕ್ಕೆ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ 10 ಬಸ್‌ಗಳಲ್ಲಿ ತೆರಳುವ 400 ಅನುಯಾಯಿಗಳಿಗೆ ಶುಭ ಕೋರಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿರುವುದನ್ನು ಕಾಣಬಹುದಾಗಿದೆ. ಎಚ್.ಸಿ ಮಹದೇವಪ್ಪ ಅವರು ಸಮಾಜ ಕಲ್ಯಾಣ ಸಚಿವರಾದ ಬಳಿಕ ರಾಜ್ಯದಲ್ಲಿ ಸಂವಿಧಾನ ಪೀಠಿಕೆಯನ್ನು ಓದುವ ಅವಕಾಶ ಹಾಗೂ ರಾಜ್ಯಾದ್ಯಂತ ಮಾನವ ಸರಪಳಿ ನಿರ್ಮಿಸುವ ಐತಿಹಾಸಿಕ ಕಾರ್ಯ ಕ್ರಮ ನಡೆದಿದೆ ಎಂದರು.
ಕಳೆದ ಮೂರು ವರ್ಷಗಳಿಂದ ಪರಿಶಿಷ್ಟ ಜಾತಿ ಸಮುದಾಯದವರನ್ನು ಐರಾವತ ಬಸ್‌ಗಳಲ್ಲಿ ದೀಕ್ಷಾ ಭೂಮಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಪ್ರವಾಸಕ್ಕೆ ತೆರಳುವ ಡಾ.ಅಂಬೇಡ್ಕರ್ ಅನುಯಾಯಿಗಳನ್ನು ಸುರಕ್ಷಿತವಾಗಿ ಹೋಗಿ ಬರಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇತಂಹ ಅವಕಾಶ ಕಲ್ಪಿಸಿಕೊಟ್ಟ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ನಗರಸಭೆ ಸದಸ್ಯರಾದ ಶಾಂತರಾಜು, ಮಂಜುನಾಥ್, ಸ್ವಾಮಿ ನಂಜಪ್ಪ ಇತರರು ಇದ್ದರು.