

ಮೈಸೂರು: ತೀವ್ರವಾದ ಕಿಡ್ನಿ ವೈಫಲ್ಯವು ಭಾರತದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ ಎಂದು ಹೈದರಾಬಾದ್‌ನ ಯಶೋಧ ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕ, ಮೂತ್ರಪಿಂಡ ಮತ್ತು ಕಿಡ್ನಿಕಸಿ ವಿಭಾಗದ ಮುಖ್ಯಸ್ಥ ಡಾ.ಎಂ.ರಾಜಶೇಖರ್ ಚಕ್ರವರ್ತಿ ಕಳವಳ ವ್ಯಕ್ತಪಡಿಸಿದರು.
ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಅಕಾಡೆಮಿಕ್ ಸೊಸೈಟಿ ಸಹಯೋಗದಲ್ಲಿ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಭಾರತದ ತೀವ್ರ ನಿಗಾ ಘಟಕಗಳಲ್ಲಿ ಕಿಡ್ನಿ ವೈಫಲ್ಯತೆಯ ಬದಲಾದ ಸನ್ನಿವೇಶಗಳು’ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.
ವಿಶೇಷವಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಸಾಮಾನ್ಯವಾಗಿ ತೀವ್ರ ನಿಗಾ ಘಟಕದ ರೋಗಿಗಳಲ್ಲಿ ಕಿಡ್ನಿ ವೈಫಲ್ಯವು ಹೆಚ್ಚಿದ್ದು, ಕಿಡ್ನಿ ವೈಫಲ್ಯತೆಯು ಅನಾರೋಗ್ಯದ ತೀವ್ರತೆ ಮತ್ತು ಐಸಿಯುಗಳಲ್ಲಿ ಚಿಕಿತ್ಸೆ ಪಡೆದ ಪ್ರಕರಣಗಳಲ್ಲಿ ಕಂಡುಬರುತ್ತದೆ ಎಂದರು.
ಚಿಕಿತ್ಸೆಯ ಸನ್ನಿವೇಶಗಳು ಮತ್ತು ಬದಲಾವಣೆಗಳು, ವೈದ್ಯಕೀಯ ಪ್ರಗತಿಗಳು, ಲಭ್ಯವಿರುವ ತಂತ್ರಜ್ಞಾನಗಳು ಮತ್ತು ರೋಗಿಗಳ ನಿರ್ವಹಣೆಯ ಮೇಲೆ ಅವಲಂಬಿತವಾಗಿವೆ. ಮೂತ್ರಪಿಂಡ ವೈಫಲ್ಯವನ್ನು ನಿರ್ವಹಿಸಲು ಸುಧಾರಿತ ರೋಗ ನಿರ್ಣಯ ಮತ್ತು ಚಿಕಿತ್ಸಾ ವಿಧಾನಗಳು ಮುಖ್ಯವಾಗಿವೆ ಎಂದರು.
ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಸಂವಹನ ಮತ್ತು ಸಮಾಲೋಚನೆ ನಡೆಸುವುದು ಉತ್ತಮ ಅಭ್ಯಾಸ ಎಂದರು.
ಸಮಾಜಕ್ಕೆ ನೀಡಬೇಕಾದ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಬಗ್ಗೆ ವೈದ್ಯರಿಗೆ ಸ್ಫೂರ್ತಿದಾಯಕ ಉಪನ್ಯಾಸ ನೀಡಿದ ಅವರು ಚಿಕಿತ್ಸಾ ವಿಧಾನದಲ್ಲಿ ನವೀನತೆ ಅಳವಡಿಸಿಕೊಳ್ಳಬೇಕು. ನಿರಂತರ ಸಂಶೋಧನೆಗಳು ನಡೆಯುತ್ತಲೇ ಇರುತ್ತದೆ. ನಮ್ಮ ಆಧುನಿಕತೆಯ ತಂತ್ರಜ್ಞಾನದ ತುಡಿತ ನಿರಂತರವಾಗಿರಬೇಕು ಎಂದು ತಿಳಿಸಿದರು.
ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು, ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ನಾರಾಯಣಪ್ಪ, ಉಪಪ್ರಾಂಶುಪಾಲ ಡಾ.ಮಾಂತಪ್ಪ, ಡಾ.ಪ್ರವೀಣ್ ಕುಲಕರ್ಣಿ, ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ವೈ.ಎಸ್.ರವಿಕುಮಾರ್, ಇಂಡಿಯನ್ ಸೊಸೈಟಿ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್ ಮೈಸೂರು ವಿಭಾಗದ ಛೇರ‌್ಮನ್ ಡಾ.ವೈದ್ಯನಾಥನ್, ಜೆಎಸ್‌ಎಸ್ ಅಕಾಡೆಮಿಕ್ ಸೊಸೈಟಿಯ ಛೇರ‌್ಮನ್ ಡಾ.ಮಂಜುನಾಥ ಶೆಟ್ಟಿ, ಕಾರ್ಯದರ್ಶಿಗಳಾದ ಡಾ.ಪಿ.ಅಶೋಕ್, ಡಾ.ಅಕ್ಷಯ್ ಇನ್ನಿತರರು ಉಪಸ್ಥಿತರಿದ್ದರು.