

ಬಳ್ಳಾರಿ : ಜಿಲ್ಲಾಡಳಿತದಿಂದ 77 ನೇ ಸ್ವಾತಂತ್ರೋತ್ಸವದ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಿ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಇಲ್ಲಿನ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಸ್ವಾತಂತ್ರೋತ್ಸವ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಆ.15 ರಂದು ಬೆಳಗ್ಗೆ 8.30 ಗಂಟೆಗೆ ನಗರದ ಎಚ್.ಆರ್.ಗವಿಯಪ್ಪ ವೃತ್ತದ ಬಳಿ ಬೃಹತ್ ಧ್ವಜಾರೋಹಣಾ ನಡೆಯಲಿದೆ. ನಂತರ 8.45 ಗಂಟೆಗೆ ವಿಮ್ಸ್ ಬಳಿಯ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಗುವುದು. ಬಳಿಕ ಬೆಳಿಗ್ಗೆ 09 ಗಂಟೆಗೆ ನಗರದ ವಿಮ್ಸ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದ್ದು, ಈ ಬಾರಿ ಕಂದಾಯ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ವಿದ್ಯಾರ್ಥಿ, ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಕುಳಿತುಕೊಳ್ಳಲು ಶ್ಯಾಮಿಯಾನ್, ಆಸನದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮತ್ತು ನುರಿತ ವೈದ್ಯರೊಂದಿಗೆ ತುರ್ತು ಚಿಕಿತ್ಸಾ ಅಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನದ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು. ದೀಪಾಲಂಕಾರ ಹಾಗೂ ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮ ಏರ್ಪಡಿಸುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಿಡಿಪಿಐ ಅಧಿಕಾರಿಗಳು ಸಮನ್ವಯತೆಯಿಂದ ಕ್ರಮ ಕೈಗೊಳ್ಳಬೇಕು ಎಂದರು.
ಶಾಲಾ-ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಕ್ರೀಡಾಂಗಣದಲ್ಲಿ ಹಾಜರಿರಬೇಕು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದ್ದು, ಸನ್ಮಾನಿತರಿಗಾಗಿ ಪ್ರತ್ಯೇಕವಾಗಿ ನಿಗದಿತ ಆಸನದ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಲಘು-ಉಪಹಾರ, ಪರೇಡ್ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಧ್ವನಿವರ್ಧಕ ಸೇರಿದಂತೆ ಕಾರ್ಯಕ್ರಮದ ವೇದಿಕೆ ವ್ಯವಸ್ಥೆ ಕುರಿತು ಚರ್ಚಿಸಲಾಯಿತು