ದಿನಸಿ ಸಾಮಗ್ರಿಗಳ ಕಿಟ್ ವಿತರಣೆ

Food Kit
Published on

ಬೀದರ್: ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ವತಿಯಿಂದ ನಗರದಲ್ಲಿ ಮಂಗಳವಾರ ಬಡ, ನಿರ್ಗತಿಕ ಕುಟುಂಬಗಳ ಮನೆಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಫೌಂಡೇಷನ್ ಮುಖ್ಯಸ್ಥ ಸೂರ್ಯಕಾಂತ ನಾಗಮಾರಪಳ್ಳಿ ನಿರ್ದೇಶನ ಮೇರೆಗೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ನೇತೃತ್ವದಲ್ಲಿ ವಿವಿಧೆಡೆ ಆಹಾರ ಕಿಟ್ ವಿತರಣೆ ಮಾಡಲಾಯಿತು. ಕೆಇಬಿ ರಸ್ತೆಯ ಜ್ಯೋತಿ ಕಾಲನಿ, ಶರಣ ನಗರ, ಬ್ಯಾಂಕ್ ಕಾಲನಿ ಹಾಗೂ ವಿವಿಧೆಡೆ ನೆಲೆಸಿರುವ ಬಡ ಕುಟುಂಬಗಳಿಗೆ ಅಕ್ಕಿ, ಅಡುಗೆ ಎಣ್ಣೆ ಸೇರಿ ವಿವಿಧ ದಿನಸಿ ಸಾಮಗ್ರಿ ಒಳಗೊಂಡಿರುವ ಕಿಟ್ ನೀಡಲಾಯಿತು. ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕಿಟ್ ವಿತರಿಸಲಾಯಿತು.
ಈ ವೇಳೆ ವೀರಶೆಟ್ಟಿ ಖ್ಯಾಮಾ ಮಾತನಾಡಿ, ಕರೊನಾ ಸಂಕಷ್ಟದಲ್ಲಿರುವ ಅನೇಕರಿಗೆ ಸೂರ್ಯಕಾಂತ ನಾಗಮಾರಪಳ್ಳಿ ಸಹಾಯಹಸ್ತ ಚಾಚಿದ್ದಾರೆ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಮುಖಾಂತರ ಸಹಸ್ರಾರು ಬಡ ಕುಟುಂಬಗಳ ಮನೆಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ಪೂರೈಸುವ ಮೂಲಕ ನೆರವಿಗೆ ಬರುತ್ತಿದ್ದಾರೆ ಎಂದು ಬಣ್ಣಿಸಿದರು.
ಕರೊನಾ ಲಾಕ್ಡೌನ್ನಿಂದ ಬಡ, ನಿರ್ಗತಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೊಂದವರ ನೆರವಿಗೆ ಬರುವುದು ಪ್ರತಿಯೊಬ್ಬರ ಕರ್ತವ್ಯ. ಕಷ್ಟದಲ್ಲಿದ್ದವರಿಗೆ ಎಲ್ಲರೂ ಕೈಲಾದಷ್ಟು ಸಹಾಯಕ್ಕೆ ಬರಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net