ದಿನಸಿ ಪಡೆಯಲು ಜನಜಂಗುಳಿ

20 vikram 4 ((No Photo))
Published on

ಧಾರವಾಡ: ಕರೊನಾ ವೈರಸ್ ಹರಡುವಿಕೆ ತಡೆಯಲು ಜಿಲ್ಲಾಡಳಿತ ಅನೇಕ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ದಿನಸಿ ಹಂಚುವ ವಿಷಯದಲ್ಲೂ ಎಚ್ಚರಿಕೆ ವಹಿಸಿ ಸ್ವೀಕೃತಿ ಕೇಂದ್ರ ಆರಂಭಿಸಿದ್ದರೂ ಜನ ಮಾತ್ರ ಅದನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ.

ದಿನಸಿ ಹಂಚುವ ಸಂದರ್ಭದಲ್ಲಿ ಹೆಚ್ಚಿನ ಜನರು ಸೇರಬಹುದು ಎಂಬ ದೃಷ್ಟಿಯಿಂದ ಸ್ವೀಕೃತಿ ಕೇಂದ್ರಗಳಲ್ಲೇ ವಸ್ತುಗಳನ್ನು ನೀಡುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದಾಗ್ಯೂ ಕಾಂಗ್ರೆಸ್ ನಾಯಕರೊಬ್ಬರು ತಮ್ಮ ಮನೆ ಎದುರೇ ಸೋಮವಾರ ಬೆಳಗ್ಗೆ ದಿನಸಿ ಹಂಚಲು ಮುಂದಾಗಿ ಆದೇಶ ಉಲ್ಲಂಘನೆ ಮಾಡಿದ್ದಲ್ಲದೆ ಜನಜಂಗುಳಿ ಸೇರಲು ಕಾರಣರಾಗಿದ್ದು ಕಂಡುಬಂತು.

ಮರಾಠಾ ಕಾಲನಿಯ ದೀಪಕ ಚಿಂಚೋರೆ ಅವರು ತಮ್ಮ ಮನೆಯಲ್ಲಿ ಬಡ ಜನರಿಗೆ ಉಚಿತವಾಗಿ ದಿನಸಿ ವಿತರಿಸಲು ಮುಂದಾಗಿದ್ದರು. ಈ ವಿಷಯ ಅರಿತ ಬಡಾವಣೆ ಸುತ್ತಲಿನ ನೂರಾರು ಮಹಿಳೆಯರು ಮನೆ ಎದುರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೆನಪಿಸಲು, ಸಲಹೆ ನೀಡಲು ಸಹ ಯಾರೂ ಇರಲಿಲ್ಲ.

ಜನ ಸೇರಿದ್ದನ್ನು ಅರಿತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಇನ್​ಸ್ಪೆಕ್ಟರ್ ಪ್ರಮೋದ ಯಲಿಗಾರ, ಸ್ವಲ್ಪ ಆವಾಜ್ ಹಾಕಿ ಮಹಿಳೆಯರ ಗುಂಪನ್ನು ಚದುರಿಸಿದರು. ಅನೇಕ ಮಹಿಳೆಯರು ಆಹಾರ ಸಾಮಗ್ರಿಯ ಗಂಟು ಸಿಗದೆ ನಿರಾಸೆಯಿಂದ ಮನೆಗಳಿಗೆ ಮರಳುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net