

ಕಲಬುರಗಿ: ಕರೊನಾ ಮಹಾಮಾರಿ ನಿಯಂತ್ರಣ ತಪ್ಪುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ಸೀಲ್ಡೌನ್ ದಾರಿ ಹಿಡಿದಿದೆ. ಹೀಗಾಗಿ ನಗರದ ಜನ ಅಗತ್ಯ ವಸ್ತುಗಳನ್ನು ಖರೀದಿಗೆ ಶುಕ್ರವಾರ ದಿನಸಿ ಅಂಗಡಿ, ಬಿಗ್ ಬಜಾರಗಳಿಗೆ ಮುಗಿಬಿದ್ದರು.
ನಿಷೇಧಾಜ್ಞೆ ಮತ್ತು ಲಾಕ್ಡೌನ್ ಜಾರಿಯಲ್ಲಿದ್ದರೂ ಜನ ಹೊರಬಂದು ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಹೊತ್ತು ಹೋಗುತ್ತಿರುವುದು ಕಂಡಿತು. ದಿನಸಿ ಅಂಗಡಿ, ತರಕಾರಿ, ಮೆಡಿಕಲ್ ಶಾಪ್ ತೆರೆದಿದ್ದ ಸಂದರ್ಭದಲ್ಲಿ ಅಷ್ಟೊಂದು ಮುಗಿಬೀಳದ ಜನ ಇಡೀ ಸಿಟಿ ಸೀಲ್ಡೌನ್ ಆಗಲಿದೆ ಎಂದು ಸುದ್ದಿ ಹರಡುತ್ತಿದ್ದಂತೆ ಮನೆಯಿಂದ ಹೊರಬಂದು ನಿತ್ಯದ ವಸ್ತುಗಳನ್ನು ಎಲ್ಲೆಡೆ ಖರೀದಿಸುತ್ತಿರುವುದು ಕಂಡು ಬಂದಿತು.
ತರಕಾರಿ ಖರೀದಿ ಜೋರು
ನಗರದ ಅಲ್ಲಲ್ಲಿ ತರಕಾರಿ ಮಾರಾಟ ನಡೆದಿದ್ದು, ಇದಕ್ಕೂ ಸಹ ಜನ ಸಂದಣಿ ಕಂಡು ಬಂದಿತು. ವಾರಕ್ಕೆ, ಹತ್ತು ದಿನಕ್ಕೆ ಆಗುವಷ್ಟು ತರಕಾರಿಯನ್ನು ಖರೀದಿಸಿದ ಜನ ತಮ್ಮ ವಾಹನದಲ್ಲಿ ಹೇರಿಕೊಂಡು ಹೋದರು. ಈ ವೇಳೆ ಪೊಲೀಸರು ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಹೇಳುತ್ತಿದ್ದರು.
ದ್ವಿಚಕ್ರ ವಾಹನ ಜಪ್ತಿ
ಜಿಲ್ಲಾಡಳಿತದ ಕಟ್ಟಪ್ಪಣೆ ಮಧ್ಯೆಯೂ ನಗರದಲ್ಲಿ ಕಾರು, ದ್ವಿಚಕ್ರ ವಾಹನಗಳು ಸಂಚರಿಸುತ್ತಿವೆ. ಟಂಟಂನಲ್ಲಿ 8-10 ಜನರನ್ನು ಕೂರಿಸಿಕೊಂಡು ಹೋಗುತ್ತಿದ್ದ ದೃಶ್ಯ ಅಚ್ಚರಿ ಮೂಡಿಸಿತು. ಬೇಕಾಬಿಟ್ಟಿ ತಿರುಗಾಡುತ್ತಿದ್ದ ಬೈಕ್ ಸವಾರರನ್ನು ತಡೆದ ಪೊಲೀಸರು ವಾಹನ ವಶಕ್ಕೆ ಪಡೆದರು. ಬಿಕೋ ಎನ್ನುತ್ತಿದ್ದ ರಸ್ತೆಯಲ್ಲಿ ಹಣ್ಣು ಮಾರಲು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸರು ಲಾಠಿ ರುಚಿ ತೋರಿಸಬೇಕಾಯಿತು. ಬೈಕ್ನಲ್ಲಿ ಚಹಾ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಗೆ ಪೊಲೀಸರು ಕಿವಿಮಾತು ಹೇಳಿ ಜಾಗ ಖಾಲಿ ಮಾಡಿಸಿದರು. ಗಂಜ್ ಪ್ರದೇಶದ ಎಸ್ಬಿಐ ಎದುರು ಜನ ಬೆಳಗ್ಗೆ 8ರಿಂದಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಕ್ಯೂನಲ್ಲಿ ನಿಂತಿದ್ದು ಕಂಡಿತು.
ಬಿಗ್ ಬಜಾರ್ ಫುಲ್ ರಶ್
ಜಗತ್ ವೃತ್ತದ ಬಳಿ ಬಿಗ್ ಬಜಾರ್ ಪರಿಸರದಲ್ಲಿ ಜನಜಂಗುಳಿ ಕಂಡುಬಂದಿತು. ಡಿಸಿಪಿ ಕಿಶೋರಬಾಬು ಅವರು ಕುಟುಂಬ ಸಮೇತ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಿದರು. ಬಜಾರ್ನವರು ಸಾಮಾಜಿಕ ಅಂತರದಲ್ಲಿ ಎಲ್ಲರನ್ನು ಹೊರಗಡೆ ಸರತಿ ನಿಲ್ಲಿಸಿದ್ದಾರೆ. ಒಳಗೆ ಇಬ್ಬರು ಅಥವಾ ಮೂವರು ಬಿಡುತ್ತಿದ್ದರು. ಜನರು ಸಹ ತಾಳ್ಮೆಯಿಂದ ಇದ್ದು ಅಂತರ ಕಾಯ್ದುಕೊಂಡು ಒಳಹೋಗುತ್ತಿದ್ದರು. ಬಿಗ್ ಬಜಾರ್ ಸ್ಟೋರ್ ಮ್ಯಾನೇಜರ್ ಚನ್ನಪ್ಪ ಶೆಟ್ಟಿ ಮತ್ತು ಸಿಬ್ಬಂದಿ ಮತ್ತು ಸೆಕ್ಯೂರಿಟಿ ಗಾಡರ್್ಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗ್ರಾಹಕರಿಗೆ ತಿಳಿಸುತ್ತಿದ್ದರು.