

ಹಾಸನ: ನಿಮ್ಮ ದಿನನಿತ್ಯದ ಜೀವನದ ಜತೆ ಯೋಗವನ್ನು ಕೂಡ ಮೈಗೂಡಿಸಿಕೊಳ್ಳಬೇಕು. ಪ್ರತಿ ಮನೆಯಲ್ಲಿ ಯೋಗ ಪಟುಗಳನ್ನು ಸೃಷ್ಟಿಸುವ ಮೂಲಕ ಸಮಾಜದಲ್ಲಿ ಯೋಗದಿಂದ ಆರೋಗ್ಯ ಎಂಬ ಜಾಗೃತಿ ಮೂಡಬೇಕೆಂದು ಹರಿದ್ವಾರ ಪತಂಜಲಿ ಯೋಗ ಪೀಠದ ಮುಖ್ಯ ಕೇಂದ್ರೀಯ ಪ್ರಭಾರಿ ಸ್ವಾಮಿ ಪರಮಾರ್ಥ ದೇವ್ ಜೀ ತಿಳಿಸಿದರು.
ನಗರದ ಚನ್ನಪಟ್ಟಣದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಪತಂಜಲಿ ಯೋಗ ಪರಿವಾರದಿಂದ ಮೇ 5 ರಿಂದ 7ರವರೆಗೂ ಹಮ್ಮಿಕೊಂಡಿರುವ ಉಚಿತ ಯೋಗ ಧ್ಯಾನ ಪ್ರಾಣಾಯಾಮದ ಎರಡನೇ ದಿನವಾದ ಮಂಗಳವಾರ ಶಿಬಿರ ಉದ್ದೇಶಿಸಿ ಮಾತನಾಡಿ,ಬೆಳಗಾವಿಯೊಂದರಲ್ಲಿ 2 ಸಾವಿರ ಶಿಕ್ಷಕರು ಕಳೆದ ಆರು ತಿಂಗಳಲ್ಲಿ ತಯಾರಾಗಿದ್ದಾರೆ. ಯೋಗ ಕಲಿತವರು ಒಬ್ಬರಿಂದ ಒಬ್ಬರಿಗೆ ಕಲಿಸುವಂತಾದರೆ ಮಾತ್ರ ಯೋಗ ಕಲಿತದ್ದು ಸಾರ್ಥಕವಾಗುತ್ತದೆ ಎಂದರು.
ಸನಾತನದಿಂದ ಯೋಗ, ಆಯುರ್ವೇದ ಬಂದಿದೆ. ಹಳ್ಳಿ ಹಳ್ಳಿಯ ಪ್ರತಿ ಮನೆಗೂ ಯೋಗ ತಲುಪಬೇಕು. ಇಂಗ್ಲೀಷ್ ಔಷಧ ಬದಲಾಗಿ ಆಯುರ್ವೇದ ಔಷಧ ಬಗೆಗಿನ ಮಹತ್ವ ತಿಳಿಸಿಕೊಡಲು ಮುಂದಾಗಿದ್ದೇವೆ. ಸಮಸ್ಯೆಗಳು ಅನೇಕ ಇದ್ದು, ಸಮಾಧಾನಕ್ಕೆ ಯೋಗ ಒಂದೇ ಮದ್ದು. ಯೋಗ ಉಚಿತ ಆರೋಗ್ಯ ಖಚಿತ, ಯೋಗ ಮಾಡಿ ನಿರೋಗಿಯಾಗಿರಿ. ಒಬ್ಬ ವ್ಯಕ್ತಿ ನೂರು ವರ್ಷಗಳ ಕಾಲ ನಿರೋಗಿಯಾಗಿ ಯಾವ ರೀತಿ ಬದುಕಬಹುದು, ಆಹಾರದ ಪದ್ಧತಿ ಕುರಿತು, ಆಯುರ್ವೇದ ಗಿಡ ಮೂಲಿಕೆಗಳ ಪರಿಚಯ ಹಾಗೂ ನಮ್ಮ ಮನೆ ಮದ್ದು ಸೇರಿದಂತೆ ಎಲ್ಲ ರೀತಿಯನ್ನು ತಿಳಿಸಿಕೊಡಲಿದ್ದಾರೆ. ಈ ಯೋಗ ಮಹೋತ್ಸವ ಎಂದರೆ ಒಂದು ರೀತಿ ಆನಂದದ ಉತ್ಸವವಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ ರಾಜ್ಯ ಪ್ರಭಾರಿ ಭವರ ಲಾಲ್ ಜಿ ಆರ್ಯ, ಪತಂಜಲಿ ಯೋಗ ಪರಿವಾರದ ನಿಕಟ ಪೂರ್ವ ಜಿಲ್ಲಾ ಸಂರಕ್ಷಕ ಹರಿಹರಪುರ ಶ್ರೀಧರ್, ಜಿಲ್ಲಾ ಸಂರಕ್ಷಕ ಲೋಕನಾಥ್, ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ, ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಗಿರೀಶ್, ಯುವ ಭಾರತ್ ಜಿಲ್ಲಾ ಪ್ರಭಾರಿ ಸುರೇಶ್ ಪ್ರಜಾಪತಿ, ಕಿಸಾನ್ ಸೇವಾ ಸಮಿತಿ ಜಿಲ್ಲಾ ಪ್ರಭಾರಿ ನಾಗೇಶ್, ಮಹಿಳಾ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಶಾರದಾ ಧರ್ಮಾನಂದ್, ಗೋಮತಿ ಕಲ್ಯಾಣ ಮಂಟಪದ ಮಾಲೀಕ ದಿನೇಶ್, ನಿಟ್ಟೂರು ಜಯರಾಮ್, ಡಾ. ಪಾಲಾಕ್ಷ ಇತರರು ಪಾಲ್ಗೊಂಡಿದ್ದರು.