

ಧಾರವಾಡ : ಹೊರಗುತ್ತಿಗೆ ಪದ್ಧತಿ ರದ್ದು ಸೇರಿ ವಿವಿಧ 22 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಲಾಯಿತು.
ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿರುವ ಎಲ್ಲ ನೌಕರರನ್ನು ಕಾಯಂಗೊಳಿಸಬೇಕು. ಕಾಯಂ ನೌಕರರಿಗೆ ಸಿಗುವ ಸೌಲಭ್ಯಗಳನ್ನು ವಿಸ್ತರಿಸಬೇಕು. ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ನೀಡಬೇಕು. ದಿನಗೂಲಿ ನೌಕರರಾಗಿ ಕಾಯಂಗೊಂಡು ನಿವೃತ್ತಿಯಾದವರಿಗೆ ತಾರತಮ್ಯ ಇಲ್ಲದೆ 8 ವರ್ಷಗಳ ಗರಿಷ್ಠ ಹೆಚ್ಚುವರಿ ಅರ್ಹತಾ ಸೇವೆ ನೀಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ಈ ಎಲ್ಲ ಬೇಡಿಕೆಗಳನ್ನು ಫೆ. 13ರೊಳಗೆ ಈಡೇರಿಸದಿದ್ದರೆ ಬಜೆಟ್ ಅಧಿವೇಶನ ಸಂದರ್ಭದಲ್ಲಿ ರಾಜ್ಯದ ಎಲ್ಲ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾ. 11ರಿಂದ 13ರವರೆಗೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಎಚ್ಚರಿಸಿದರು.
ಮಹಾಮಂಡಳದ ಪದಾಧಿಕಾರಿಗಳಾದ ಶ್ರೀನಿವಾಸ ಬಳ್ಳಾರಿ, ಎಂ.ಎಲ್. ಕುಲಕರ್ಣಿ, ಬಸಯ್ಯ ಹಂಚಿನ, ಎಚ್.ಆರ್. ಬೂದಿಹಾಳ ಹಾಗೂ ನೂರಾರು ದಿನಗೂಲಿ ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದರು.