ದಿಟ್ಟ ನಿರ್ಧಾರಗಳು ಕಾಂಗ್ರೆಸ್​ನಿಂದ ಸಾಧ್ಯ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಅನುಮೋದನೆ ನೀಡಿದ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ. ಅಭಿವೃದ್ಧಿಗೆ ಒತ್ತು, ಮಹತ್ತರ ಘೊಷಣೆಗಳು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂಬುವುದಕ್ಕೆ ಈ ನಿರ್ಧಾರವು ಉತ್ತಮ ನಿದರ್ಶನ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಜೆಪಿ ಸರ್ಕಾರ ಇದ್ದಾಗ ವಿಶೇಷವಾಗಿ ಈ ಭಾಗದವರೇ ಆದ ಜಗದೀಶ ಶೆಟ್ಟರ್ ಆಗಲಿ ಬಸವರಾಜ ಬೊಮ್ಮಯಿ ಆಗಲಿ ಪ್ರತ್ಯೇಕ ಮಹಾನಗರ ಪಾಲಿಕೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ನಿಷ್ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ. ಅವರಲ್ಲಿ ಇಚ್ಛಾಶಕ್ತಿ ಇದ್ದಿದ್ದರೆ ಆಗಲೇ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಆದರೆ, ಈ ಬಗ್ಗೆ ನಿರ್ಧಾರ ತೆಗೆದು ಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿ ಅವರದ್ದು ಕೇವಲ ಪ್ರಯತ್ನಕ್ಕೆ, ಹೇಳಿಕೆಗಳಿಗೆ ಮಾತ್ರ ಸೀಮಿತ. ಆದರೆ, ಕಾಂಗ್ರೆಸ್ ಸರ್ಕಾರ ಅನುಷ್ಠಾನ ಗೊಳಿಸುವಲ್ಲಿ ಸದಾ ಮುಂದು ಎಂದು ಬಿಜೆಪಿಗೆ ತಿವಿದಿದ್ದಾರೆ.

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವೇ ಬರಬೇಕಾಯಿತು. ಉಸ್ತುವಾರಿ ಸಚಿವ ಸಂತೋಷ ಲಾಡ್, ನಾನು ಹಾಗೂ ವಿನಯ ಕುಲಕರ್ಣಿ ಅವರೇ ಮುತುವರ್ಜಿ ವಹಿಸ ಬೇಕಾಯಿತು. ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವಂತೆ ಪ್ರಸ್ತಾಪ ಮಾಡಿದ್ದೆ. ಮನವಿಗೆ ಸ್ಪಂದಿಸಿದ ನಗರಾಭಿವೃದ್ಧಿ ಸಚಿವರು 10 ದಿನಗಳ ಸಮಯ ಕೇಳಿದ್ದರು. ಇದೀಗ ಅವರು ತಾವು ನೀಡಿದ ಭರವಸೆ ಈಡೇರಿಸಿದ್ದಾರೆ ಎಂದು ಹೇಳಿದ್ದಾರೆ.

ನಾಲ್ಕು ತಿಂಗಳ ಹಿಂದೆಯೂ ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ನಾನು, ಸಚಿವ ಸಂತೋಷ ಲಾಡ್ ಮತ್ತು ಶಾಸಕ ವಿನಯ ಕುಲಕರ್ಣಿ ಸೇರಿ ರ್ಚಚಿಸಿ ಅವರಿಗೆ ಮನವಿ ಮಾಡಿದ್ದೆ. ಪ್ರತ್ಯೇಕ ಪಾಲಿಕೆ ಸ್ಥಾಪನೆಯಿಂದ ಆಡಳಿತದಲ್ಲಿ ಹೊರೆ ಕಡಿಮೆಯಾಗಿ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಪ್ರತ್ಯೇಕ ಅನುದಾನ ದೊರೆತು ಅಭಿವೃದ್ಧಿಗೆ ವೇಗ ದೊರೆಯಲಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿವೆ ಎಂದು ಅಬ್ಬಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net