ದಾಸಿಮಯ್ಯ ಮನುಕುಲದ ಪ್ರತಿಪಾದಕ

22ydg01
Published on

ಯಾದಗಿರಿ: ಭಾವ ಶುದ್ಧಿಯಯ ಭಕ್ತಿ, ವೈವಾಹಿಕ ಜೀವನದ ಶಿಸ್ತು, ಸ್ತ್ರೀ ಪುರುಷ ಸಮಾನತೆಯ ತತ್ವಸಾರಿ ಮನುಕುಲಕ್ಕೆ ಧರ್ಮ ಸಂಸ್ಕಾರ ನೀಡಿದವರು ದೇವರ ದಾಸಿಮಯ್ಯನವರು ಎಂದು ಸಾಹಿತಿ ವೆಂಕಟೇಶ ಕಲಕಂಭ ಹೇಳಿದರು.

ಶ್ರಾವಣ ಮಾಸದ ನಿಮಿತ್ತ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಜೆ ಅಖಿಲ ಭಾರತ ವೀರಶೈವ ಮಹಾಸಭಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು. ಹಾಗೂ ವೀರಶೈವ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ದೇವರ ದಾಸಿಮಯ್ಯನವರು ರಾಮನಾಥ ಎಂಬ ಅಂಕಿತ ನಾಮದಿಂದ ಸತ್ಯ, ಧರ್ಮ, ನೀತಿ ಹಾಗೂ ಸಹಕಾರ ಸಹಬಾಳ್ವಯ ಪ್ರತೀಕವನ್ನು ವ್ಯಕ್ತಪಡಿಸುವ 176 ವಚನಗಳನ್ನು ರಚಿಸಿ ಜನಪ್ರಜ್ಞೆಯನ್ನು ಮೂಡಿಸಿದ್ದು, ಮನುಕುಲದ ಪ್ರತಿಪಾದಕರಾಗಿದ್ದಾರೆ ಎಂದರು.

ಸುರಪುರ ತಾಲೂಕಿನ ಮುದನೂರ ಗ್ರಾಮದ ನೇಕಾರ ಮನೆತನದಲ್ಲಿ ರಾಮಯ್ಯ ಮತ್ತು ಶಂಕ್ರಮ್ಮ ದಂಪತಿಯ ಮಗನಾಗಿ ಜನಿಸಿ, ದೈವಭಕ್ತೆ ದುಗ್ಗಳೆಯನ್ನು ಮದುವೆಯಾಗಿ ಸತಿ ಪತಿಗಳೊಂದಾಗಿ ಸಂಸಾರದಲ್ಲಿ ಇದ್ದುಕೊಂಡೇ ಶಿವನ ಸಾಕ್ಷಾತ್ಕಾರ ಪಡೆದ ಮಹಾ ಶರಣರು. ಜಗತ್ತಿನ ಒಡೆಯ ಲೋಕದ ಸೃಷ್ಠಿಕರ್ತ ಶಿವನಾಗಿರುವಾಗ ಅನ್ಯರಿಗೆ ತೆಲೆಬಾಗಿ ಅವರನ್ನು ಹೊಗಳಿ, ಸ್ವಂತಿಕೆಯನ್ನು ಮಾರಿಕೊಂಡು ಬದುಕುವವರನ್ನು ಕುನ್ನಿಗಳು ಎಂದು ಹೇಳುವ ದಾಸಿಮಯ್ಯ, ನಿಷ್ಠುರ ಹಾಗೂ ನಿಸ್ವಾರ್ಥ ವಚನಕಾರರಾಗಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ರಾಮಗಿರಿ ಮಠದ ಬಸವರಾಜಶಾಸ್ತ್ರಿ, 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಧರ್ಮ ಸಮಾನತೆಯ ಮಾರ್ಗ ತೋರಿಸಿದವರು ಶಿವಶರಣರು. ಕಲ್ಯಾಣದ ಅನುಭವ ಮಂಟಪದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಹೊಸ ಯುಗವನ್ನು ಪ್ರಾರಂಭಿಸಲಾಯಿತು. ಲಿಂಗ ತಾರತಮ್ಯ, ಅಸಮಾನತೆಯಿಂದ ಕೊಡಿದ್ದ ಸಮಾಜದಲ್ಲಿ ಸಮಾನತೆ ತಂದುಕೊಟ್ಟರು. ಭಕ್ತಿ ಮಾರ್ಗದ ಮೂಲಕ ಆದರ್ಶ ಜಿವನಕ್ಕೆ ಬುನಾದಿಯನ್ನು ಹಾಕಿಕೊಟ್ಟರುಎಂದು ನುಡಿದರು.

ಪ್ರಾಚಾರ್ಯ ಡಾ.ಸುಭಾಶ್ಚ್ಚಂದ್ರ ಕೌಲಗಿ, ಶರಣರ ಜೀವನ ಚರಿತ್ರೆ ಹಾಗೂ ಸಮಾಜಕ್ಕೆ ಕೊಟ್ಟ ಸಂದೇಶಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮ್ಮಿಕೊಳ್ಳಲಾಗಿದೆ. ಮುಂದಿನ ಶ್ರಾವಣ ಸೋಮವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಶಿವಭಕ್ತಾದಿಗಳು ಪಾಲ್ಗೂಳುವಂತೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net