ದಾಸನದೊಡ್ಡಿಯಲ್ಲಿ ಹತ್ತಾರು ಸಮಸ್ಯೆ

02 HANUR 1 C
Published on

ಹನೂರು: ಕುಡಿಯುವ ನೀರಿನ ತೊಂಬೆ ಪಾಚಿ ಕಟ್ಟಿದೆ. ಸಿಸಿ ರಸ್ತೆ, ಚರಂಡಿ ನಿರ್ಮಿಸಿಲ್ಲ. ಕೊಳಚೆ ನೀರು ರಸ್ತೆಯಲ್ಲ್ಲಿ ಹರಿಯುತ್ತಿದೆ. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಗಿಡಗಂಟಿಗಳು ಬೆಳೆದು ನಿಂತಿದೆ. ರಾತ್ರಿಯಾದರೆ ಸೊಳ್ಳೆಗಳ ಕಾಟ. ಇದರಿಂದಾಗಿ ಗ್ರಾಮದಲ್ಲಿ ಅನೈರ್ಮಲ್ಯ ಮನೆ ಮಾಡಿದೆ.
ಇದು ಹನೂರು ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನದೊಡ್ಡಿ ಗ್ರಾಮದ ನಿವಾಸಿಗಳು ಎದುರಿಸುತ್ತಿರುವ ನಿತ್ಯ ಸಮಸ್ಯೆ. ಮೂಲ ಸೌಕರ್ಯದಿಂದ ವಂಚಿತರಾಗಿರುವುದೇ ಸಮಸ್ಯೆಗೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಗ್ರಾಮದಲ್ಲಿ ಉಪ್ಪಾರ ಸಮುದಾಯದವರು ಕಳೆದ ಒಂದು ದಶಕದಿಂದ ವಾಸಿಸುತ್ತಿದ್ದಾರೆ. ಇಲ್ಲಿ 75 ಕುಟುಂಬಗಳಿವೆ. ಸುಮಾರು 250ಕ್ಕೂ ಹೆಚ್ಚು ಜನಸಂಖ್ಯೆಯನ್ನು ಗ್ರಾಮ ಹೊಂದಿದೆ. ಇಲ್ಲಿ ಬಹುತೇಕ ಎಲ್ಲಾ ಕುಟುಂಬಗಳು ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿವೆ. ಆದರೆ ಗ್ರಾಪಂ ಆಡಳಿತದ ನಿರ್ಲಕ್ಷ್ಯದಿಂದ ರಸ್ತೆ, ಚರಂಡಿ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯ ಮರಿಚೀಕೆಯಾಗಿದೆ. ಪರಿಣಾಮ ಇಲ್ಲಿನ ಜನರು ಕಷ್ಟದ ನಡುವೆ ದಿನ ದೂಡುವಂತಾಗಿದೆ. ಆದರೂ ಗ್ರಾಪಂ ಆಡಳಿತ ಕಿಂಚಿತ್ತೂ ಗಮನಹರಿಸದಿರುವುದು ವಿಪರ್ಯಾಸ.
ಸಿಸಿ ರಸ್ತೆ, ಚರಂಡಿ ಕಾಣದ ರಸ್ತೆಗಳು:
ಗ್ರಾಮದಲ್ಲಿ 3 ಬೀದಿಗಳಿವೆ. ಒಂದರಲ್ಲಿ ಮಾತ್ರ ಕಳೆದ ವರ್ಷ ರಸ್ತೆ, ಚರಂಡಿ ನಿರ್ಮಾಣವಾಗಿದೆ. ಇನ್ನುಳಿದ 2 ಬೀದಿಗಳಲ್ಲಿ ಸೂಕ್ತ ರಸ್ತೆ ಇಲ್ಲ ನಿರ್ಮಿಸಿಲ್ಲ. ಪರಿಣಾಮ ಕೊಳಚೆ ನೀರು ಬೀದಿಯಲ್ಲಿ ಹರಿಯುತ್ತಿದೆ. ಅಲ್ಲದೇ ತಗ್ಗುದಿಣ್ಣೆಯಿಂದ ಕೂಡಿದ ಈ ರಸ್ತೆಯಲ್ಲಿ ಮಳೆ ಬಂದ ವೇಳೆ ನೀರು ಹಲವು ದಿನಗಳವರೆಗೆ ನಿಲ್ಲುತ್ತದೆ. ಇದರಿಂದ ಸಂಚರಿಸಲು ಸಮಸ್ಯೆಯಾಗಿದೆ. ಅಲ್ಲದೇ ಕಳೆದ 2 ತಿಂಗಳ ಹಿಂದೆ ಸುರಿದ ಸತತ ಮಳೆಗೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿತ್ತು. ರಸ್ತೆ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳು ಹಾಗೂ ಗ್ರಾಪಂ ಅಧಿಕಾರಿಗಳಿಗೆ ಇಲ್ಲಿನ ನಿವಾಸಿಗಳು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ಗ್ರಾಪಂ ಆಡಳಿತ ಮೌನ ವಹಿಸಿದೆ. ಇದರಿಂದ ಇಲ್ಲಿನ ನಿವಾಸಿಗಳು ತೊಂದರೆಯನ್ನು ಅನುಭವಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net