ದಾಸ ಸಾಹಿತ್ಯದಿಂದ ನೆಮ್ಮದಿ ಜೀವನ

das
Published on

ಬೀದರ್: ತಂತ್ರಜ್ಞಾನ, ವೈಜ್ಞಾನಿಕ ಯುಗದಲ್ಲಿ ಅಂತರಂಗದ ನೆಮ್ಮದಿ ಹಾಗೂ ಅಲೌಕಿಕ ಆನಂದಕ್ಕಾಗಿ ದಾಸ ಸಾಹಿತ್ಯ ಪ್ರಸ್ತುತವೆನಿಸಿದೆ. ಸುಖ ಜೀವನಕ್ಕೆ ದಾಸ ಸಾಹಿತ್ಯ ಸಂಜೀವಿನಿ ಮಾರ್ಗ ಎಂದು ಜಿಲ್ಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷ ಪ್ರಶಾಂತ ರಾಗಾ ಹೇಳಿದರು.

ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ ನಿಂದ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಧುನಿಕ ದಾಸ ವಿದ್ಯಾವಾಚಸ್ಪತಿ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ರಚಿಸಿದ ಹರಿದಾಸರ 10 ಸಾವಿರ ಹಾಡುಗಳ ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡಿ ಮಾತನಾಡಿ, ದಾಸರು ಭಕ್ತಿ ಮಾರ್ಗದಲ್ಲಿ ಭಗವಂತನೆಂಬ ಮೂಲ ಸತ್ಯ ಹುಡುಕಿ ಇಡೀ ಸಮುದಾಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಜಾತಿ, ಮತ, ಧರ್ಮ ಮೀರಿ ನಿಂತವರು ದಾಸರು. ಎಲ್ಲರೂ ಸಹಬಾಳ್ವೆ ಜೀವನ ನಡೆಸಬೇಕು ಎನ್ನುವುದೇ ನಿಜವಾದ ಧರ್ಮ ಎಂದು ಸಾರಿದ್ದಾರೆ ಎಂದರು.

ಸಾಹಿತಿ ಡಾ.ಸಂಜೀವಕುಮಾರ ಅತಿವಾಳೆ ಉಪನ್ಯಾಸ ನೀಡಿ, ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ದೊಡ್ಡಬಳ್ಳಾಪುರದ ಅರಳುಮಲ್ಲಿಗೆಯಲ್ಲಿ ಜನಿಸಿ, ಶ್ರೀ ವಿಜ್ಞಾನನಿಧಿತೀರ್ಥ ಶ್ರೀಪಾದರಿಂದ ದಾಸ ದೀಕ್ಷೆ ಪಡೆದು ಪಾರ್ಥಸಾರಥಿ ವಿಠಲದಾಸ ಎಂಬ ಅಂಕಿತ ಅನುಗ್ರಹಿಸಿ, ಆಧುನಿಕ ಹರಿದಾಸರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. 50ಕ್ಕೂ ಹೆಚ್ಚು ಗ್ರಂಥ ರಚಿಸಿದ್ದಾರೆ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಪರಿಷತ್ ಅಧ್ಯಕ್ಷ ರವೀಂದ್ರ ಲಂಜವಾಡಕರ್ ಮಾತನಾಡಿ, 13-14ನೇ ಶತಮಾನದಲ್ಲಿ ಜನ್ಮ ತಾಳಿದ ಹರಿದಾಸ ಸಾಹಿತ್ಯ ಇಂದಿಗೂ ಆಧುನಿಕ ಹರಿದಾಸರು ಮುಂದುವರಿಸಿದ್ದಾರೆ. ಇಂಥ ಅಮೂಲ್ಯವಾದ ದಾಸ ಸಾಹಿತ್ಯ ನಿರಂತರ ಪ್ರಚಾರ ಮಾಡಲು ಪರಿಷತ್ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಬಸವರಾಜ ನೌಬಾದೆ ಸ್ವಾಗತಿಸಿದರು. ಅಬ್ದುಲ್ ಅಲಾಸ್ ನಿರೂಪಣೆ ಮಾಡಿದರು. ಆತ್ಮಾನಂದ ಬಂಬುಳಗಿ ವಂದಿಸಿದರು. ಡಾ.ಶಾಮರಾವ ನೆಲವಾಡೆ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net