ದಾವಣಗೆರೆಯಲ್ಲಿ ನಿರುದ್ಯೋಗ ಭತ್ಯೆಗಾಗಿ ಎಐಡಿವೈಒ ಪ್ರತಿಭಟನೆ

dvg-aidyo-25_20230525232847952.jpg
Published on

ದಾವಣಗೆರೆ: ಎಲ್ಲ ನಿರುದ್ಯೋಗಿಗಳಿಗೂ ನಿರುದ್ಯೋಗ ಭತ್ಯೆ ನೀಡಲು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿದ್ದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಸಂಘಟನೆಯ ಜಿಲ್ಲಾ ಸಂಚಾಲಕ ಎಸ್. ಪರಶುರಾಮ್ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಚುನಾವಣೆಯಲ್ಲಿ ನೀಡಿದ್ದ ಭರವಸೆ ಈಡೇರಿಸಲು ಮೊದಲ ಮಂತ್ರಿಮಂಡಲದ ಸಭೆಯಲ್ಲಿಯೆ ತೀರ್ಮಾನಿಸಿ ಷರತ್ತುಬದ್ಧ ಆದೇಶ ಹೊರಡಿಸಿದೆ ಎಂದು ತಿಳಿಸಿದರು. ಆದರೆ, ಪದವಿ ಮತ್ತು ಡಿಪ್ಲೊಮಾ ಮುಗಿಸಿರುವ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯ ಪ್ರಕಾರ, 2022-23ನೇ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಅದೂ ಎರಡು ವರ್ಷಗಳ ಅವಧಿಗೆ ಮಾತ್ರ ಎಂಬ ಷರತ್ತು ವಿಧಿಸಲಾಗಿದೆ. ಹಾಗಾದರೆ ಈ ಅವಧಿಗೆ ಮುನ್ನ ಪದವಿ, ಡಿಪ್ಲೊಮಾ, ಇನ್ನಿತರ ವೃತ್ತಿಪರ ಕೋರ್ಸ್‌ಗಳನ್ನು ಮುಗಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರು ನಿರುದ್ಯೋಗಿಗಳಲ್ಲವೆ? ಎಂದು ಪ್ರಶ್ನಿಸಿದರು. ನಿಜವಾಗಿಯೂ ನಿರುದ್ಯೋಗದ ಬಿಸಿ ತಟ್ಟುತ್ತಿರುವುದು ಹತ್ತಾರು ವರ್ಷಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರಿಗೆ. ಅವರಿಗೆ ನಿರುದ್ಯೋಗ ಭತ್ಯೆ ನೀಡಬೇಕಾಗಿರುವುದು ಅತ್ಯವಶ್ಯಕ ಎಂದು ತಿಳಿಸಿದರು. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಸರ್ಕಾರವೇ ನಿಗದಿಪಡಿಸಿರುವ ವಯೋಮಿತಿಯಲ್ಲಿರುವ ಎಲ್ಲ ನಿರುದ್ಯೋಗಿಗಳಿಗೂ ಉದ್ಯೋಗ ದೊರಕುವವರೆಗೆ ನಿರುದ್ಯೋಗ ಭತ್ಯೆ ನೀಡಬೇಕೆಂದು ಆಗ್ರಹಿಸಿದರು. ಜಿಲ್ಲಾ ಸಂಘಟನಾಕಾರರಾದ ಶಶಿಕುಮಾರ್, ಗುರುಪ್ರಸಾದ್, ಮನು, ರಾಘವೇಂದ್ರ ಪ್ರತಿಭಟನೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net