ದಾವಣಗೆರೆಯಲ್ಲಿ ಅಂಚೆ ಮೇಳ

IMG-20230526-WA0064.jpg
Published on

ದಾವಣಗೆರೆ: ಅಂಚೆ ಇಲಾಖೆ ಕಳೆದ 150 ವರ್ಷದಿಂದ ಜನಸೇವೆಯೊಂದಿಗೆ ನಂಬಿಕೆ ಉಳಿಸಿಕೊಂಡಿದೆ. ಕಾಲಕ್ಕೆ ತಕ್ಕಂತೆ ಜನರ ಬೇಡಿಕೆಗಳ ಈಡೇರಿಕೆಗೆ ಅನುಗುಣವಾಗಿ ಹೊಸ ಯೋಜನೆಗಳೊಂದಿಗೆ ಇಂದಿಗೂ ಪ್ರಸ್ತುತವಾಗಿದೆ ಎಂದು ದಾವಣಗೆರೆ ಅಂಚೆ ವಿಭಾಗದ ಅಧೀಕ್ಷಕ ಚಂದ್ರಶೇಖರ ಹೇಳಿದರು.

ಬಾಪೂಜಿ ಫಾರ್ಮಸಿ ಕಾಲೇಜಿನಲ್ಲಿ ಶುಕ್ರವಾರ ದಾವಣಗೆರೆ ಅಂಚೆ ವಿಭಾಗದಿಂದ ಆಯೋಜಿಸಿದ್ದ ಅಂಚೆ ಮೇಳ ಉದ್ಘಾಟಿಸಿ ಮಾತನಾಡಿ ಮೇಳದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿ, ಅವರಿಗೆ ಯೋಜನೆಗಳ ಲಾಭ ಒದಗಿಸುವತ್ತ ಯಶಸ್ವಿಯಾಗಿದೆ. ಇನ್ನೂ ಹೆಚ್ಚು ಮೇಳಗಳನ್ನು ಆಯೋಜಿಸಲು ಸ್ಫೂರ್ತಿ ನೀಡಿದೆ ಎಂದು ತಿಳಿಸಿದರು. ದಾವಣಗೆರೆ ಒಂದನೇ ವಿಭಾಗದ ಅಂಚೆ ಅಧೀಕ್ಷಕಿ ಆರ್. ಉಷಾ, ಎಸ್‌ಎಸ್ ಬಡಾವಣೆಯ ಅಂಚೆ ಪಾಲಕ ಎ.ಆರ್. ಹರೀಶ್,ಅಂಚೆ ಮಾರುಕಟ್ಟೆ ಕಾರ್ಯನಿರ್ವಾಹಕ ಅಧಿಕಾರಿ ಬಿ. ಸಂತೋಷ್, ಪ್ರಧಾನ ಅಂಚೆ ಕಚೇರಿಯ ಸಿಬ್ಬಂದಿ ಜಗದೀಶ್ ಬಾರ್ಕಿ, ಜಾಕೀರ್ ಹುಸೇನ್, ಟಿ.ಆರ್. ಪ್ರವೀಣ್, ಬಿ.ಹನುಮಂತಪ್ಪ, ಜಿ.ಕೆ. ಪ್ರವೀಣ್, ಟಿ.ಆರ್. ಶ್ವೇತಾ ಇದ್ದರು. ಮೇಳದಲ್ಲಿ 50 ಆಧಾರ್ ಕಾರ್ಡ್ ತಿದ್ದುಪಡಿ, 20 ಐಪಿಪಿಬಿ ಖಾತೆಗಳು, 11 ವಿವಿಧ ಅಂಚೆ ಉಳಿತಾಯ ಖಾತೆ, 16 ಟಾಟಾ ಅಪಘಾತ ವಿಮೆ, 9 ಅಂಚೆ ಜೀವ ವಿಮೆ ಪಾಲಿಸಿಗಳ ಮೂಲಕ ಗ್ರಾಹಕರು ಅಂಚೆ ಯೋಜನೆಗಳ ನೆರವು ಪಡೆದರು. 93 ವರ್ಷದ ವಯೋವೃದ್ಧರೊಬ್ಬರು ಆಧಾರ್ ತಿದ್ದುಪಡಿ ಮಾಡಲು ವ್ಹೀಲ್‌ಚೇರ್ ಮೂಲಕ ಮೇಳಕ್ಕೆ ಹಾಜರಾಗಿದ್ದು ವಿಶೇಷವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net