ದಾವಣಗೆರೆ ವಿವಿಯಲ್ಲಿ ಬೋಧಕ ಸಿಬ್ಬಂದಿಗೆ ಕಾರ್ಯಾಗಾರ

dvg-university-jun-25.jpg
Published on

ದಾವಣಗೆರೆ: ಶಿಕ್ಷಕರು ಓದು, ಅಧ್ಯಯನ, ಸಂಶೋಧನೆ ಜತೆಗೆ ಕಲಿಕೆಯ ಆಸಕ್ತಿ ಬೆಳೆಸಿಕೊಂಡು ಇಂದಿನ ಸವಾಲುಗಳನ್ನು ಸ್ವೀಕರಿಸಲು ಬೌದ್ಧಿಕವಾಗಿ ಸಿದ್ಧರಾಗುವುದು ಅನಿವಾರ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಯೋಜನೆ, ನಿರ್ವಹಣೆ ಮತ್ತು ಮೌಲ್ಯಮಾಪನ ಮಂಡಳಿ (ಪಿಎಂಇ) ಹಾಗೂ ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್ (ಕೆಎಎಎಸ್) ವತಿಯಿಂದ ಉತ್ಕೃಷ್ಟತೆಗೆ ಸಂವಾದಾತ್ಮಕ ಚಟುವಟಿಕೆ ಕುರಿತು ಬೋಧಕ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಪರಂಪರಾಗತ ಜ್ಞಾನದ ಜತೆಗೆ ತಮ್ಮಲ್ಲಿನ ಹೊಸ ಕಲಿಕೆಯ ಜ್ಞಾನವನ್ನು ಮಕ್ಕಳಿಗೆ ಒಯ್ಯುವ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ವೃತ್ತಿಪರ ಆಲೋಚನೆ, ಸೇವಾ ಮನೋಭಾವ, ಕಾಯಕ ತತ್ವಗಳನ್ನು ಶಿಕ್ಷಕರು ರೂಢಿಸಿಕೊಳ್ಳಬೇಕು. ಅತ್ಯಾಧುನಿಕ ತಂತ್ರಜ್ಞಾನ, ಆವಿಷ್ಕಾರಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಕಲಿಕೆ, ಸಂಶೋಧನೆಯ ಜತೆಗೆ ಸಾಮಾಜಿಕ ಸಮಸ್ಯೆಗಳ ಪರಿಜ್ಞಾನ ಇರಬೇಕು. ಇಂದಿನ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ, ಅವುಗಳಿಗೆ ಶಾಶ್ವತ ಪರಿಹಾರ ಒದಗಿಸುವ ಸಂಶೋಧನೆಗಳು ಅತ್ಯಗತ್ಯ. ಚಿಂತನೆ, ಚರ್ಚೆಯಂತಹ ಕ್ರಿಯಾಶೀಲ ಕಾರ್ಯ ಚಟುವಟಿಕೆಯ ಮೂಲಕ ಸಿಬ್ಬಂದಿಗೆ ಕಾಲಕಾಲಕ್ಕೆ ಚೈತನ್ಯ ತುಂಬುವುದು ಶೈಕ್ಷಣಿಕ ಬೆಳವಣಿಗೆಯ ಭಾಗವಾದಾಗ ಗುಣಾತ್ಮಕ ಫಲಿತಾಂಶ ನಿರೀಕ್ಷಿಸಬಹುದು ಎಂದು ಹೇಳಿದರು.

ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಓದಿಗಾಗಿ ಓದುವುದು, ಪಾಠಕ್ಕಾಗಿ ಕಲಿಯುವುದಕ್ಕಿಂತ ವಿದ್ಯಾರ್ಥಿಗಳಲ್ಲಿ ಜ್ಞಾನಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರ ಅಧ್ಯಯನ ಇರಬೇಕು. ಮಾತಿಗಿಂತ ಕೃತಿಯೂ ಅವಶ್ಯ ಎಂದರು.

ತಂತ್ರಜ್ಞಾನದ ಕೊಡುಗೆಯ ಪರಿಣಾಮವಾಗಿ ಶಿಕ್ಷಕರು ಪಾಠ ಹೇಳುವ ಮುನ್ನವೇ ವಿದ್ಯಾರ್ಥಿಗಳು ಅಧ್ಯಯನ ಮಾಡಿ ತರಗತಿಗೆ ಬಂದಿರುತ್ತಾರೆ. ಆದ್ದರಿಂದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರಸ್ತುತ ವೈಜ್ಞಾನಿಕ ಬೆಳವಣಿಗೆಯನ್ನು ವಿಭಿನ್ನ ದೃಷ್ಟಿಯಿಂದ ವಿಮರ್ಶಿಸುವ ರೀತಿಯಲ್ಲಿ ಮತ್ತು ವಿದ್ಯಾರ್ಥಿಗಳಿಗೆ ಸವಾಲು ನೀಡುವ ರೀತಿಯಲ್ಲಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ್, ಸಂಪನ್ಮೂಲ ವ್ಯಕ್ತಿ ಮುಕ್ತಾ ಕಾಗಲಿ, ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶಂಕರ್ ಇದ್ದರು. ಪ್ರಾಧ್ಯಾಪಕ ಪ್ರೊ. ನಾಗಸ್ವರೂಪ ಸ್ವಾಗತಿಸಿದರು. ಪ್ರೊ. ಡಿ.ಜಿ. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಆರ್.ಶಶಿಧರ ವಂದಿಸಿದರು. ಡಾ.ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net