ದಾವಣಗೆರೆ ಮತಗಟ್ಟೆಗಳಲ್ಲಿ ಮತದಾನದ ಉತ್ಸಾಹ ಮತಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಭವಿಷ್ಯ

mata-1.jpg
Published on

ದಾವಣಗೆರೆ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ನೀರಸ ಆರಂಭ ಕಂಡ ಮತದಾನ ಪ್ರಕ್ರಿಯೆ ಮಧ್ಯಾಹ್ನದ ಹೊತ್ತಿಗೆ ಚುರುಕಾಗಿತ್ತು. ಬೆಳಗ್ಗೆ 10 ಗಂಟೆ ನಂತರದಲ್ಲಿ ಬಿಸಿಲಿನ ನಡುವೆಯೂ 1685 ಮತಗಟ್ಟೆಗಳಲ್ಲಿ ಮತದಾರರ ಉತ್ಸಾಹ ಕಂಡುಬಂದಿತು.

ಕೆಲವು ಸಾಮಾನ್ಯ ಮತಕೇಂದ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿತ್ತು. ಆಕರ್ಷಕ ಸಖಿ ಮತಗಟ್ಟೆಗಳಲ್ಲಿ ಮಹಿಳೆಯರು ಮತ ಹಾಕಿ ಸಂಭ್ರಮಿಸಿದರು. ಯುವ ಮತದಾರರು ಸರದಿ ಸಾಲಿನಲ್ಲಿ ನಿಂತು ಕುತೂಹಲದಿಂದ ಮತದಾನ ಮಾಡಿದರು.

ಕೆಲವು ಅಂಗವಿಕಲರು, ಹಿರಿಯ ನಾಗರಿಕರು ವ್ಹೀಲ್‌ಚೇರ್ ಆಸರೆಯಲ್ಲಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಮತಕೇಂದ್ರಗಳತ್ತ ವಾಹನಗಳಲ್ಲಿ ವಯೋವೃದ್ಧರನ್ನು ಕರೆತಂದ ಕುಟುಂಬ ಸದಸ್ಯರು ಮತದಾನ ಮಾಡಿಸುತ್ತಿದ್ದರು.

ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಜಿಲ್ಲಾದ್ಯಂತ ಶೇ.6.99ರಷ್ಟು ಮತದಾನ ದಾಖಲಾಗಿತ್ತು. 11 ಗಂಟೆ ವೇಳೆಗೆ 20.78 ರಷ್ಟಿದ್ದ ಮತ ಪ್ರಮಾಣ, 1 ಗಂಟೆ ಹೊತ್ತಿಗೆ 38.64ಕ್ಕೆ ತಲುಪಿತು.

ಸಂಜೆ 4-15ರ ಸುಮಾರಿಗೆ ಕೆಲವಡೆ ಮಳೆ ಸಿಂಚನವಾಯಿತು. ಕೆಲವರು ಮತಗಟ್ಟೆಗೆ ಬರಲು ತೊಂದರೆಯಾದರೂ ಸಂಜೆ 5 ಗಂಟೆ ಅಂತ್ಯಕ್ಕೆ ಶೇ,70.61ರಷ್ಟು ಮತ ಮತಯಂತ್ರಗಳಲ್ಲಿ ದಾಖಲಾದವು. ಕಡೆಯ ಒಂದು ಗಂಟೆಯಲ್ಲಿ ಮತದಾರರ ಉತ್ಸಾಹ ಹೆಚ್ಚಾಗಿತ್ತು.

ಆರಂಭದಿಂದಲೂ ನಾಗಾಲೋಟದಲ್ಲಿದ್ದ ಜಗಳೂರು ಕ್ಷೇತ್ರದಲ್ಲಿ ಒಟ್ಟಾರೆ ಶೇ.75.78ರಷ್ಟು ಮತ ಚಲಾವಣೆ ಆದರೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ (58.82) ಮತದಾನವಾಯಿತು.

ಯುವ ಹವಾ:

ಚುನಾವಣಾ ಗುರ್ತಿನ ಚೀಟಿ, ಆಧಾರ್‌ಕಾರ್ಡ್‌ಗಳನ್ನಿಡಿದು ಮತಗಟ್ಟೆಗಳ ಬಳಿ ಅನೇಕ ಯುವ ಮತದಾರರು ನಿಂತಿದ್ದರು. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಮತ ಹಾಕುತ್ತಿರುವುದಾಗಿ ಬಹುತೇಕರು ಹೇಳಿಕೊಂಡರು.

ಅಣಜಿಯ ಮತಗಟ್ಟೆಯಲ್ಲಿ ಎಂಸಿಎ ವ್ಯಾಸಂಗ ಮಾಡುತ್ತಿರುವ ಎ.ಎಸ್.ಸ್ಪೂರ್ತಿ, ಇಂಜಿನಿಯರಿಂಗ್ ಓದುತ್ತಿರುವ ಸೋದರ .ಎಸ್.ರಂಜನ್ ಅವರೊಂದಿಗೆ ತೆರಳಿ ಮತದಾನ ಮಾಡಿ ಗಮನ ಸೆಳೆದರು.

ಮಾಯಕೊಂಡದ ಮತಕೇಂದ್ರದಲ್ಲಿ ಸೋದರಿಯರಾದ ಎಚ್.ರೇಖಾ- ದೀಪಾ ಮೊದಲ ಬಾರಿಗೆ ಹಕ್ಕು ಚಲಾಯಿಸಿದ ಖುಷಿ ಅನುಭವಿಸಿದರು. ತೊಂದರೆಯಲ್ಲಿರುವ ರೈತರು, ವಿದ್ಯಾರ್ಥಿಗಳಿಗೆ ಅನುಕೂಲತೆಗಳು ಸಿಗಬೇಕಿದೆ. ಉತ್ತಮ ಅಭ್ಯರ್ಥಿಗಳನ್ನು ಚುನಾಯಿಸುವ ಉದ್ದೇಶದಿಂದ ಮತದಾನ ಮಾಡಿದ ಬಗ್ಗೆ ಚಿತ್ರದುರ್ಗದಲ್ಲಿ ನರ್ಸಿಂಗ್ ಓದುತ್ತಿರುವ ರೇಖಾ ಹೇಳಿಕೊಂಡರು.

*ಬದಲಿ ಅಧಿಕಾರಿ ನಿಯೋಜನೆ

ಹರಿಹರ ಕುಂಬಾರ ಓಣಿ ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 31ರಲ್ಲಿ ಪಕ್ಷವೊಂದರ ಪರ ಮತ ಹಾಕಿಸಲು ಮುಂದಾಗಿದ್ದರು ಎಂದು ಆರೋಪಿಸಲಾದ, ಮತಗಟ್ಟೆ ಅಧ್ಯಕ್ಷಾಧಿಕಾರಿ ಶಾರದಾ ಅವರನ್ನು ಕರ್ತವ್ಯದಿಂದ ವಿಮುಕ್ತಿಗೊಳಿಸಿ ಇತರೆ ಅಧಿಕಾರಿ ನೇಮಿಸಲಾಯಿತು.

ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವಂತೆ ಹೇಳಿದ್ದಾಗಿ ಖಲಂದರ್‌ಸಾಬ್ ಎಂಬುವರು ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಮಾಹಿತಿ ತಿಳಿದ ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಸ್ಥಳಕ್ಕೆ ಧಾವಿಸಿ ಅಧಿಕಾರಿಯನ್ನು ಅಮಾನತುಗೊಳಿಸಲು ಪಟ್ಟು ಹಿಡಿದರು ಎನ್ನಲಾಗಿದೆ.

ಆರೋಪದ ಹಿನ್ನೆಲೆಯಲ್ಲಿ ಬದಲಿ ಅಧಿಕಾರಿ ನಿಯೋಜಿಸಿ ಮತದಾನ ಪ್ರಕ್ರಿಯೆ ನಡೆಸಲಾಗಿದೆ. ಈ ಪ್ರಕರಣದಲ್ಲಿ ಪಿಆರ್‌ಒ ವರದಿ ನೀಡಿದ ಬಳಿಕ ಡಿಸಿ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರದ ಚುನಾವಣಾಧಿಕಾರಿ ವಿನಯ್ ಕುಂಬಾರ್ ಪತ್ರಿಕೆಗೆ ತಿಳಿಸಿದರು.

*ಕೆಲವೆಡೆ ಯಂತ್ರಗಳ ಬದಲು:

ಮತದಾನ ಸಂದರ್ಭದಲ್ಲಿ ಜಿಲ್ಲೆಯ ಕೆಲವೆಡೆ ಮತಯಂತ್ರಗಳನ್ನು ಬದಲಾವಣೆ ಮಾಡಲಾಯಿತು. ದಾವಣಗೆರೆ ದಕ್ಷಿಣ ಕ್ಷೇತ್ರದ ಮತಗಟ್ಟೆ ಸಂಖ್ಯೆ 31, 70, 76, 177, 209ರಲ್ಲಿ ವಿವಿ ಪ್ಯಾಟ್‌ನ ಚಿತ್ರಗಳು ಮಸುಕಾಗಿ ಕಾಣುತ್ತಿದ್ದರಿಂದ ತಕ್ಷಣಕ್ಕೆ ಇಂಜಿನಿಯರ್‌ಗಳನ್ನು ಕರೆಸಿ ಯಂತ್ರಗಳನ್ನು ಬದಲಾವಣೆ ಮಾಡಲಾಯಿತು.

ಹರಿಹರ ಕ್ಷೇತ್ರದಲ್ಲೂ 7 ವಿವಿ ಪ್ಯಾಟ್, 1 ಕಂಟ್ರೋಲ್ ಯುನಿಟ್, 1 ಬ್ಯಾಲೆಟ್ ಯುನಿಟ್ ಬದಲಾವಣೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

* ಪ್ರಮುಖರ ಮತದಾನ:

ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ, ಉತ್ತರ ಕ್ಷೇತ್ರದ ಕೈ ಅಭ್ಯರ್ಥಿ ಮಲ್ಲಿಕಾರ್ಜುನ್, ಪತ್ನಿ ಪ್ರಭಾ ಮಲ್ಲಿಕಾರ್ಜುನ್, ಮಕ್ಕಳಾದ ಸಮರ್ಥ, ಶ್ರೇಷ್ಠಾ ಅವರೊಂದಿಗೆ ಐಎಂಎ ಸಭಾಂಗಣದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ದಕ್ಷಿಣ ಕ್ಷೇತ್ರದ ಬಿಜೆಪಿ ಹುರಿಯಾಳು ಬಿ.ಜಿ.ಅಜಯಕುಮಾರ್ ಪತ್ನಿ ಮಂಗಳಾ, ಪುತ್ರಿ ಎ.ಜಿ.ನೇಹಾ, ಸಹೋದರಿ ವಾಣಿಶ್ರೀ ಫಣಿರಾಜ್‌ಅವರೊಂದಿಗೆ ಬಕ್ಕೇಶ್ವರ ಶಾಲೆಯಲ್ಲಿ ಹಕ್ಕು ಚಲಾಯಿಸಿದರು. ಇದೇ ಕ್ಷೇತ್ರದ ಎಸ್‌ಯುಸಿಐ(ಸಿ) ಉಮೇದುವಾರ್ತಿ ಕೆ. ಭಾರತಿ ಮತ ಚಲಾಯಿಸಿದರು.

ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ವಿದ್ಯಾನಗರದ ರೋಟರಿ ಕ್ಲಬ್‌ನ ಮತಗಟ್ಟೆಯಲ್ಲಿ ಪತ್ನಿ ಲತಾ ಅವರೊಂದಿಗೆ ಮತ ಹಾಕಿದರು. ಶಿರಮಗೊಂಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆ ಸಂ.175ರಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್ ಮತದಾನ ಮಾಡಿದರು. ಬೆಂಗಳೂರಿನಿಂದ ಬಂದ ಎಂಎಲ್ಸಿ ತೇಜಸ್ವಿನಿ ಗೌಡ ನಗರದ ಮತಗಟ್ಟೆ ಸಂಖ್ಯೆ 227ರಲ್ಲಿ ಹಕ್ಕು ಚಲಾವಣೆ ಮಾಡಿದರು. ಕೊಗ್ಗನೂರಲ್ಲಿ ಮಾಯಕೊಂಡ ಜೆಡಿಎಸ್ ಅಭ್ಯರ್ಥಿ ಎಚ್.ಆನಂದಪ್ಪ ಪತ್ನಿ ಸಹಿತ ಮತ ಚಲಾಯಿಸಿದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net