ದಾವಣಗೆರೆ ದಕ್ಷಿಣದಲ್ಲಿ ಸಚಿವ ಮಲ್ಲಿಕಾರ್ಜುನ್ ರ‌್ಯಾಲಿ

ra-1.jpg
Published on

ದಾವಣಗೆರೆ: ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಮಂಗಳವಾರ ಸಂಭ್ರಮದ ಸ್ವಾಗತ ನೀಡಿದರು.

ಸಚಿವರಾಗಿ ಶನಿವಾರ ತವರಿಗೆ ಆಗಮಿಸಿದ್ದ ಮಲ್ಲಿಕಾರ್ಜುನ ಅವರಿಗೆ ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಅಭಿಮಾನಿಗಳು ಸ್ವಾಗತಿಸಿ ರ‌್ಯಾಲಿ ಹಮ್ಮಿಕೊಂಡಿದ್ದರು. ಮೆರವಣಿಗೆ ಅರ್ಧಕ್ಕೆ ಮೊಟಕಾಗಿತ್ತು. ಮಂಗಳವಾರ ದಕ್ಷಿಣ ಭಾಗದ ಅಭಿಮಾನಿಗಳಿಗಾಗಿ ರ‌್ಯಾಲಿ ಆಯೋಜಿಸಲಾಗಿತ್ತು. ಅಪಾರ ಸಂಖ್ಯೆಯ ಕಾರ್ಯಕರ್ತರು ಸಾಕ್ಷಿಯಾಗಿದ್ದರು.

ಮೆರವಣಿಗೆಗೂ ಮುನ್ನ ವೀರಮದಕರಿ ನಾಯಕ ವೃತ್ತದಲ್ಲಿ ಮದಕರಿನಾಯಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಎಸ್ಸೆಸ್ಸೆಂ, ಅಲ್ಲಿನ ದರ್ಗಾಕ್ಕೆ ತೆರಳಿದರು. ಅಲ್ಲಿಂದ ನಗರದೇವತೆ ದುರ್ಗಾಂಭಿಕಾ ದೇವಸ್ಥಾನದಲ್ಲಿಯೂ ಆಶೀರ್ವಾದ ಪಡೆದು ರ‌್ಯಾಲಿಯಲ್ಲಿ ಭಾಗವಹಿಸಿದ್ದರು. ಮಾರ್ಗಮಧ್ಯೆಯ ಪ್ರತಿಮೆಗಳಿಗೂ ಮಾಲಾರ್ಪಣೆ ಮಾಡಲಾಯಿತು.

ವಿಶೇಷ ವಾಹನದಲ್ಲಿ ಅವರೊಂದಿಗೆ ತಂದೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಭಾಗಿಯಾಗಿ ಮೆರವಣಿಗೆ ಮಾರ್ಗದುದ್ದಕ್ಕೂ ಜನರಿಗೆ ಕೈ ಬೀಸಿದರು. ಮಾರ್ಗಮಧ್ಯೆ ಅಭಿಮಾನಿಗಳು ಇಬ್ಬರಿಗೂ ಭಾರೀ ಹಾರಗಳನ್ನು ಅರ್ಪಿಸಿ ಅಭಿಮಾನ ಮೆರೆದರು. ಕೆಲವರು ಕಂಬಳಿ ತೊಡಿಸಿ ಗೌರವಿಸಿದರು. ಕೆಲವೆಡೆ ಜನರು ಮೇಲ್ಮಹಡಿಯಿಂದಲೇ ಪುಷ್ಪಾರ್ಚನೆ ಮಾಡಿದರು.

ರ‌್ಯಾಲಿಯುದ್ದಕೂ ಡಿಜೆ ಸದ್ದು ಮಾಡಿತು. ಮಲ್ಲಿಕಾರ್ಜುನ್ ಕುರಿತ ವಿಶೇಷ ಧ್ವನಿಮುದ್ರಿತ ಹಾಡು ‘ಜೈ ಜೈ ಮಲ್ಲಣ್ಣ’ ಮಾರ್ಧನಿಸಿತು. ರಸ್ತೆ ರಸ್ತೆಯಲ್ಲೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಯಂತ್ರದ ಮೂಲಕ ಆಗಸದೆತ್ತರಕ್ಕೆ ಪ್ಲಾಸ್ಟಿಕ್ ಹಾಳೆಗಳನ್ನು ಚಿಮ್ಮಿಸಿ ಮಳೆಗೆರೆಯಲಾಯಿತು.

ಚಿಣ್ಣರು, ವಯೋವೃದ್ಧರೆಂಬ ಭೇದವಿಲ್ಲದೆ ಕೈಮುಗಿದ ಮಲ್ಲಿಕಾರ್ಜುನ್ ನಗೆ ಬೀರಿದರು. ಮಹಿಳಾ ಕಾರ್ಯಕರ್ತರು ಹಾಡುಗಳಿಗೆ ಹೆಜ್ಜೆಯಾದರು. ರೋಡ್‌ಷೋ ಶಿವಾಜಿ ವೃತ್ತ, ಹಗೇದಿಬ್ಬ ವೃತ್ತ, ಆಜಾದ್‌ನಗರ ಮುಖ್ಯರಸ್ತೆ, ಅರಳಿಮರ ವೃತ್ತ ಮೂಲಕ ವೆಂಕಟೇಶ್ವರ ವೃತ್ತಕ್ಕೆ ಸಾಗಿ ಮುಕ್ತಾಯವಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮೇಯರ್ ವಿನಾಯಕ ಪೈಲ್ವಾನ್, ಬಿ.ವೀರಣ್ಣ, ಮುದೇಗೌಡ್ರ ಗಿರೀಶ್, ಸೈಯದ್ ಸೈಫುಲ್ಲಾ, ಮಾಲತೇಶ ಜಾಧವ್, ಎಚ್.ಬಿ.ಗೋಣೆಪ್ಪ, ದಿನೇಶ್ ಕೆ ಶೆಟ್ಟಿ, ಗಡಿಗುಡಾಳು ಮಂಜುನಾಥ್, ಎ.ನಾಗರಾಜ್, ಕೆ.ಜಿ.ಶಿವಕುಮಾರ್, ಅಯೂಬ್ ಪೈಲ್ವಾನ್, ಸಯೀದ್ ಚಾರ್ಲಿ, ಉದ್ಯಮಿ ಎಸ್ಸೆಸ್ ಗಣೇಶ್, ತಂಜೀಂ ಕಮಿಟಿ ಅಧ್ಯಕ್ಷ ದಾದುಸೇಠ್, ಚಮನ್‌ಸಾಬ್, ಪಾಮೇನಹಳ್ಳಿ ನಾಗರಾಜ್, ಉದಯಕುಮಾರ್, ರಹೀಂಸಾಬ್, ಕೋಳಿ ಇಬ್ರಾಹಿಂ, ಸೀಮೆಎಣ್ಣೆ ಮಲ್ಲೇಶ್, ಎಂ. ಹಾಲೇಶ್, ಅನಿತಾಬಾಯಿ, ಕವಿತಾ ಸೇರಿ ಅನೇಕ ಮುಖಂಡರು ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ನಮ್ಮ ತಂದೆಯವರ ಮೇಲೆ ವಿಶ್ವಾಸವಿಟ್ಟು ಈ ಭಾಗದ ಜನರು ಸತತವಾಗಿ ಗೆಲ್ಲಿಸಿಕೊಂಡು ಬರುತ್ತಿದ್ದು, ನಿಮ್ಮ ಋಣವನ್ನು ನಾವು ತೀರಿಸುತ್ತೇವೆ ಎಂದು ಹೇಳಿದರು.

7 ವರ್ಷದ ಹಿಂದೆ ನಮ್ಮ ಅವಧಿಯಲ್ಲೇ ದಾವಣಗೆರೆ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆ ಆಗಿದ್ದು, ಇದನ್ನು ಈ ಭಾಗಕ್ಕೆ ಸೀಮಿತವಾಗಿ ಅಭಿವೃದ್ಧಿಗೊಳಿಸಲಾಯಿತು. ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಶೇ.40 ರಷ್ಟು ಕಮಿಷನ್ ಸರ್ಕಾರ ಹೋಗಿ ಜನಪರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಚುನಾವಣೆಗೂ ಮುನ್ನ ಭರವಸೆ ನೀಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕೆಂದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net