ದಾವಣಗೆರೆ ಜಿಲ್ಲೆಯ 500 ಕಡೆ ಭಗವದ್ಗೀತೆ ಉಪನ್ಯಾಸ

IMG-20220918-WA0033.jpg
Published on

ದಾವಣಗೆರೆ: ಭಗವದ್ಗೀತೆ ಕುರಿತಂತೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಈ ದಿಸೆಯಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ಭಾಗವಾಗಿ ಜಿಲ್ಲಾದ್ಯಂತ 500 ಕಡೆಗಳಲ್ಲಿ ಉಪನ್ಯಾಸ ಆಯೋಜಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಂಘಟಕರಿಗೆ ಸೂಚಿಸಿದರು.

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ದಾವಣಗೆರೆಯಲ್ಲಿ ಡಿಸೆಂಬರ್‌ನಲ್ಲಿ ಆಯೋಜಿಸಲಾಗುತ್ತಿರುವ ಶ್ರೀ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಅಂಗವಾಗಿ ನಗರದ ನಿಜಲಿಂಗಪ್ಪ ಬಡಾವಣೆಯ ಶಂಕರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಮುಖಂಡರ ಸಭೆಯಲ್ಲಿ ಮಾತನಾಡಿದರು. ಸಪ್ತಾಹ, ಮೂರು ದಿನ ಅಥವಾ ಒಂದು ಗಂಟೆಗೆ ಸೀಮಿತವಾಗಿ ಮೂರು ಬಗೆಗಳಲ್ಲಿ ಉಪನ್ಯಾಸ ನಡೆಸಬಹುದು. ದೇವಸ್ಥಾನ, ಕಾಲೇಜು, ಕಲ್ಯಾಣಮಂಟಪಗಳಲ್ಲಿ ನವೆಂಬರ್ 4ರಿಂದ ಇದನ್ನು ಆಯೋಜಿಸಬೇಕು. ಉಪನ್ಯಾಸಕರಿಗೆ ಒಂದು ದಿನದ ಕಾರ್ಯಾಗಾರದ ಮೂಲಕ ತರಬೇತಿ ನೀಡಲಾಗುವುದು ಎಂದರು. ಶ್ಲೋಕ ಕೇಂದ್ರದ ಸಂಚಾಲಕರು ಶಾಲೆ ಹಾಗೂ ಪಪೂ ಕಾಲೇಜುಗಳಿಗೆ ಪರಿಣತ ಶಿಕ್ಷಕರನ್ನು ನಿಯೋಜಿಸಿ, ಅಲ್ಲಿನ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಶ್ಲೋಕಗಳನ್ನು ಕಲಿಸಬೇಕು. ಈ ವಿಚಾರವಾಗಿ ಶಿಕ್ಷಕರಿಗೂ ಕೂಡ ಶೀಘ್ರವೇ ತರಬೇತಿ ನೀಡಲಾಗುವುದು. ಪ್ರತಿ ಮನೆಗಳಲ್ಲಿಯೂ ನ.4ರಿಂದ ನಿರಂತರ ಪಠಣ ನಡೆಸಬೇಕು. ನ.27ರಿಂದ ಗೀತಾ ಜಯಂತಿ ನಡೆಯಲಿದ್ದು, ಸಪ್ತಾಹದ ಕಾಲ ಮನೆಗಳಲ್ಲಿ ಭಗವದ್ಗೀತೆ ಪುಸ್ತಕ ಪೂಜೆ ಮಾಡಬೇಕು. ಭಗವದ್ಗೀತೆ ಕುರಿತಂತೆ ವಿದ್ಯಾರ್ಥಿಗಳಿಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ಆಯೋಜಿಸುವಂತೆ ರಾಷ್ಟ್ರೋತ್ಥಾನ ಶಾಲೆಯ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಸ್ಪರ್ಧೆ ವಿಭಾಗದವರು ತಾಲೂಕುಗಳಲ್ಲಿಯೂ ಇದರ ನಿರ್ವಹಣೆ ಕುರಿತು ಮೇಲುಸ್ತುವಾರಿ ಮಾಡಬೇಕು ಎಂದರು. ಸಾಹಿತ್ಯ ವಿಭಾಗದ ಸಂಚಾಲಕರು ಭಗವದ್ಗೀತೆ ಪುಸ್ತಕಗಳನ್ನು ನಿಗದಿತ ದರಕ್ಕೆ ಮಾರಾಟ ಮಾಡಿ, ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಬೇಕು. ಕೆಲವು ಕಡೆ ಉಚಿತವಾಗಿ ವಿತರಿಸುವುದಾದಲ್ಲಿ ದಾನಿಗಳು, ಪ್ರಾಯೋಜಕರ ನೆರವು ಪಡೆಯಬೇಕು. ಸಹಕಾರಿ ಬ್ಯಾಂಕ್‌ನಲ್ಲಿ ಪ್ರತ್ಯೇಕ ಖಾತೆ ತೆರೆದು ದಾನಿಗಳು ನೀಡಿದ ಹಣವನ್ನು ಇರಿಸಬೇಕು ಎಂದು ಸಲಹೆ ನೀಡಿದರು. ಅಭಿಯಾನಕ್ಕೆ ಪೂರಕವಾಗಿ ಜಿಲ್ಲಾ ಸಮಿತಿ, ಶ್ಲೋಕ ಕೇಂದ್ರ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳು, ಸಂಚಾಲಕರನ್ನು ನೇಮಿಸಲಾಯಿತು. ಮುಖಂಡರಾದ ಡಾ. ಎಸ್.ಆರ್. ಹೆಗಡೆ, ಕೆ.ಬಿ.ಶಂಕರನಾರಾಯಣ, ಡಾ.ಬಿ.ಟಿ.ಅಚ್ಯುತ, ಕುಸುಮಶೆಟ್ಟಿ, ಶಶಿಕಾಂತ್, ವಿನಾಯಕ ರಾನಡೆ, ಚಿದಂಬರ ದೀಕ್ಷಿತ್, ತಿಪ್ಪೇಸ್ವಾಮಿ, ಕೆ.ಬಿ.ಕೊಟ್ರೇಶ್, ಶ್ರೀಧರ್, ಶಂಭುಲಿಂಗಪ್ಪ, ಸಿ.ಕೆ. ಆನಂದತೀರ್ಥಾಚಾರ್, ಬಾಲಕೃಷ್ಣ ವೃದ್ಯ, ನಳಿನಿ ಅಚ್ಯುತ, ಡಾ. ಆರತಿ ಸುಂದರೇಶ್ ಇತರರಿದ್ದರು. ---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net