

ಡಿ.ಎಂ.ಮಹೇಶ್, ದಾವಣಗೆರೆ
ವಯಸ್ಸಿನ್ನೂ ಹತ್ತೊಂಬತ್ತು. ನಟಿಸಿದೊಂದು ಸಿನಿಮಾದಿಂದ ಹೆಸರಾದ ಚಿಗುರು ಮೀಸೆಯ ಯುವಕನಿವ. ಚೊಚ್ಚಲ ಮತದಾನದ ಕನಸು ಹೊತ್ತಿರುವ ಈತನೀಗ ಜಿಲ್ಲೆಯ ಮತ ಜಾಗೃತಿ ಅಭಿಯಾನದ ಸಾರಥಿ!
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲಾ ರಾಯಭಾರಿಯಾಗಿ ನೇಮಕಗೊಂಡಿದ್ದಾನೆ. ಈತ ಬೇರಾರೂ ಅಲ್ಲ, ಉದಯೋನ್ಮುಖ ಚಿತ್ರನಟ ಪೃಥ್ವಿ ಕೆ.ಆರ್.ಶಾಮನೂರು.
ದಾವಣಗೆರೆ ಜಿಪಂ ಸಿಇಒ ಹಾಗೂ ಸ್ವೀಪ್ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ.ಎ.ಚನ್ನಪ್ಪ ಅವರ ಸಲಹೆಯಂತೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಈ ನೇಮಕ ಆದೇಶ ಹೊರಡಿಸಿದ್ದಾರೆ. ರಾಯಭಾರತ್ವಕ್ಕಾಗಿ ಇದ್ದ ಕೆಲವರ ಹೆಸರುಗಳಲ್ಲಿ ಪೃಥ್ವಿ ನೇಮಕಗೊಂಡಿದ್ದು, ದಾವಣಗೆರೆ ಉತ್ತರ ಕ್ಷೇತ್ರದಿಂದ ಇನ್ನಷ್ಟೇ ಹಕ್ಕು ಚಲಾಯಿಸಬೇಕಿದೆ. ಜತೆಗೆ ಜಿಲ್ಲೆಯ ಮತದಾರರನ್ನೂ ಎಚ್ಚರಗೊಳಿಸಬೇಕಿದೆ!
ಶಾಮನೂರು ಗ್ರಾಮದ ನಿವೃತ್ತ ಪ್ರಾಧ್ಯಾಪಕ ಕೆ.ಎಂ. ರವಿ-ಮಂಜುಳಾ ದಂಪತಿಯ ಪುತ್ರರಾದ ಪೃಥ್ವಿ ಕೆ.ಆರ್.ಶಾಮನೂರು, ನಗರದ ಆರ್.ಜಿ.ಕಾಲೇಜಿನಲ್ಲಿ ದ್ವಿತೀಯ ವರ್ಷದ ಬ್ಯಾಚುಲರ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಓದುತ್ತಿದ್ದಾರೆ. ಮಾರ್ಷಲ್ ಆರ್ಟ್ಸ್‌ನಲ್ಲಿದ್ದ ಆಸಕ್ತಿ ರಾಜ್ಯ ವುಶು ಕ್ರೀಡಾಪಟುವಾಗಿ ಇವರನ್ನು ಬೆಳೆಸಿತು.
ಬ್ಯಾಂಕಾಕ್‌ನಲ್ಲಿ 2018-19ರಲ್ಲಿ ಆಯೋಜಿಸಿದ್ದ ಸೌತ್ ಏಷ್ಯಾ ಫೆಸಿಪಿಕ್ ಪ್ರಿನ್ಸ್ ಮಾಡೆಲಿಂಗ್‌ನ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಟೀನ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದರು. ಇತ್ತೀಚೆಗೆ ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಂ ನಿರ್ಮಾಣದಡಿ ತೆರೆಕಂಡ, ಹರಿಪ್ರಸಾದ್ ನಿರ್ದೇಶನದ ‘ಪದವಿ ಪೂರ್ವ’ ಚಿತ್ರದಲ್ಲಿ ಚೊಚ್ಚಲ ನಾಯಕನಟನಾಗಿ ಅಭಿನಯಿಸಿದ್ದರು.
ಐದು ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ಚಂದನವನ ಫಿಲಂ ಕ್ರಿಟಿಕ್ಸ್ ಅವಾರ್ಡ್‌ನಡಿ ಉದಯೋನ್ಮುಖ ನಟ ಪ್ರಶಸ್ತಿಗೂ ಭಾಜನರಾದರು. ಯೋಗರಾಜ್‌ಭಟ್ ನಿರ್ದೇಶನದ ‘ಗರಡಿ’ ಚಿತ್ರದಲ್ಲಿ ನಾಯಕನಟನ ಪ್ರೌಢಾವಸ್ಥೆಯ ಕ್ಯಾರೆಕ್ಟರ್ ನಿಭಾಯಿಸಿದ್ದಾರೆ. ಹೆಸರಿಡದ ಮತ್ತೊಂದು ಚಿತ್ರದಲ್ಲಿ, ಅಮೋಲ್ ಪಾಟೀಲ್ ನಿರ್ದೇಶನದಲ್ಲಿ ನಾಯಕನಟನಾಗಿ ಪೃಥ್ವಿ ಅಭಿನಯಿಸುತ್ತಿದ್ದಾರೆ.
ತಂದೆ ರವಿ ಶಾಮನೂರು ಅವರ ‘ಮಹಾತ್ಮಗಾಂಧಿ ಅಧ್ಯಯನ ಮತ್ತು ಪರಿಸರ ಸಂರಕ್ಷಣಾ ಫೌಂಡೇಷನ್ ಸಂಸ್ಥೆ (ಎನ್‌ಜಿಒ)ಯೊಂದಿಗೆ ಜತೆಗೂಡಿ ಹಲವಾರು ಸಮಾಜ ಸೇವಾ ಕಾರ್ಯಗಳನ್ನು ನಡೆಸಿದ್ದಾರೆ. ಅನಾಥ ಶವಗಳನ್ನು ಅಂತಿಮಸಂಸ್ಕಾರ ಮಾಡುವಲ್ಲಿ ನೆರವಾಗಿದ್ಧಾರೆ. ನೆರೆ ಸಂತ್ರಸ್ತರಿಗೆ ಸ್ಪಂದಿಸಿ ಸಹಾಯಹಸ್ತ ಚಾಚಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಊಟ ವಿತರಿಸಿದ್ದಾರೆ. ಕ್ಯಾನ್ಸರ್ ಜಾಗೃತಿಯ ಮ್ಯಾರಥಾನ್, ಪರಿಸರ ಜಾಗೃತಿ ಅಭಿಯಾನಗಳಲ್ಲಿಯೂ ಭಾಗಿಯಾಗಿದ್ದಾರೆ.
‘ಚಂದನವನದಲ್ಲಿ ದೊಡ್ಡ ಹೆಸರು ಮಾಡುವುದು ನನ್ನ ಬಹುದೊಡ್ಡ ಕನಸು. ಆಯೋಗ ಕಲ್ಪಿಸಿದ ಚುನಾವಣಾ ರಾಯಭಾರಿಯಾಗಿ ಯುವಕರಲ್ಲದೆ ಎಲ್ಲ ಮತದಾರರನ್ನು ಮತದಾನದತ್ತ ಸೆಳೆಯುವ ಕೆಲಸ ಮಾಡುತ್ತೇನೆ. ವಿದ್ಯಾವಂತರು ಮತದಾನದಲ್ಲಿ ಭಾಗಿಯಾಗುತ್ತಿಲ್ಲ. ಸಂವಹನದೊಂದಿಗೆ ಇದರ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಸಿಕೊಂಡು, ಸಿನಿಮಾ ಪ್ರಮೋಷನ್ ಮಾದರಿಯಲ್ಲೇ ಚುನಾವಣಾ ಜಾಗೃತಿ ಗೀತೆಗಳನ್ನು ಪ್ರಸಾರ ಮಾಡುವ ಉದ್ದೇಶವಿದೆ. ಅದರ ಸಾಹಿತ್ಯ ಮತ್ತು ಶೂಟಿಂಗ್ ಬಗ್ಗೆ ಚರ್ಚೆ ನಡೆಸುತ್ತಿದ್ದೇನೆ’ ಎಂದು ಪೃಥ್ವಿ ಶಾಮನೂರು ‘ವಿಜಯವಾಣಿ’ಗೆ ವಿವರಿಸಿದರು.
---