ದಾವಣಗೆರೆ-ಚಿತ್ರದುರ್ಗ ಪ್ರತ್ಯೇಕ ಮೆಗಾ ಡೇರಿ ಸ್ಥಾಪನೆಗೆ ಆಗ್ರಹ

dvg-basavantappa.jpg
Published on

ದಾವಣಗೆರೆ  : ಕಲ್ಪನಹಳ್ಳಿ ಬಳಿ ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೇರಿ ಸ್ಥಾಪಿಸಲು ಭೂಮಿ ಖರೀದಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.  ವಿಧಾನಸಭೆಯಲ್ಲಿ ಬುಧವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಡೇರಿ ಆರಂಭಿಸಿದರೆ ಈ ಭಾಗದ ರೈತರು ಆರ್ಥಿಕವಾಗಿ ಸಬಲರಾಗಲಿದ್ದಾರೆ ಎಂದು ಸದನದ ಗಮನ ಸೆಳೆದರು.  ಹೈನುಗಾರಿಕೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಸಬ್ಸಿಡಿ ಕೊಡುವುದನ್ನು ಶೇ. 75 ಕ್ಕೆ ಹೆಚ್ಚಳ ಮಾಡಿದರೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ ಉತ್ತಮ ಬದುಕು ಕಟ್ಟಿಕೊಳ್ಳುತ್ತಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದರು.  ಮಧ್ಯ ಕರ್ನಾಟಕದ ಅತೀ ಹಿಂದುಳಿದ ಮೀಸಲು ಕ್ಷೇತ್ರ ಮಾಯಕೊಂಡ. ಸಿರಿಗೆರೆ ತರಳಬಾಳು ಜಗದ್ಗುರುಗಳ ಹೋರಾಟದ ಫಲವಾಗಿ ನನ್ನ ಕ್ಷೇತ್ರದಲ್ಲಿ 22 ಕೆರೆಗಳ ಯೋಜನೆ ಜಾರಿಗೊಂಡು ಎಲ್ ಆ್ಯಂಡ್ ಟಿ ಕಂಪನಿ ಕಾಮಗಾರಿ ನಡೆಸಿತ್ತು. ಕಳಪೆ ಕಾಮಗಾರಿಯಿಂದ 100 ಹಳ್ಳಿಗಳಿಗೆ ಕುಡಿಯುವ ನೀರು, ನೀರಾವರಿ ಕಲ್ಪಿಸಬೇಕೆಂಬ ಉದ್ದೇಶ ಈಡೇರಿಲ್ಲ. ಪುನಃ ಹೊಸ ಪೈಪ್‌ಲೈನ್ ಕಾಮಗಾರಿಗೆ ಹಣ ನೀಡಿ ಕಾಮಗಾರಿ ಆರಂಭಿಸುವಂತೆ ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.  ನನ್ನ ಕ್ಷೇತ್ರದಲ್ಲಿ ಹೆಚ್ಚು ಗುಡ್ಡಗಾಡು ಪ್ರದೇಶ ಹೊಂದಿದ್ದು, ಹೆಚ್ಚು ಕೆರೆಗಳನ್ನು ನಿರ್ಮಾಣ ಮಾಡಿದರೆ ಜನ, ಜಾನುವಾರುಗಳಿಗೆ ಕುಡಿಯುವ ನೀರು, ಅಂತರ್ಜಲ ವೃದ್ಧಿಗೆ ಅನುಕೂಲವಾಗುತ್ತದೆ. ಬ್ರಿಟಿಷರು ನಿರ್ಮಿಸಿದ ಕೆರೆಯನ್ನು ಜೀರ್ಣೋದ್ಧಾರ ಮಾಡಿದರೆ ಪಕ್ಷಿ ಸಂಕುಲ, ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಬಹುದು ಎಂದು ಹೇಳಿದರು.  ಎಸ್ಸಿ-ಎಸ್ಟಿ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಭೂಒಡೆತನ ಯೋಜನೆಯಡಿ ಕ್ಷೇತ್ರಕ್ಕೆ ಕೇವಲ ಒಂದೇ ಸೌಲಭ್ಯ ಕೊಟ್ಟರೆ ಸಾಧ್ಯವಾಗುವುದಿಲ್ಲ. ಇದಕ್ಕೆ ಹೆಚ್ಚು ಒತ್ತು ಕೊಡಬೇಕು. ಖಾಸಗಿ ಕಾಲೇಜುಗಳಲ್ಲಿ ಡಿಪ್ಲೊಮಾ, ನರ್ಸಿಂಗ್, ಪ್ಯಾರಾ ಮೆಡಿಕಲ್ ಸೇರಿ ವೃತ್ತಿಪರ ಕೋರ್ಸ್‌ನಲ್ಲಿ ಅಭ್ಯಾಸ ಮಾಡುವ ಎಸ್ಸಿ-ಎಸ್ಟಿ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.  ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಹಗಲು ದರೋಡೆ ಮಾಡಲಾಗುತ್ತಿದೆ. ಹೊರ ಗುತ್ತಿಗೆ ತೆಗೆದು ನೇರವಾಗಿ ನೇಮಕಾತಿ ಮಾಡಿಕೊಳ್ಳಬೇಕು. ಶೋಷಿತ ಸಮುದಾಯಗಳಿಗೆ ತ್ವರಿತ ನ್ಯಾಯ ಒದಗಿಸಲು ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ರಾಜ್ಯದಲ್ಲಿ 33 ವಿಶೇಷ ಪೊಲೀಸ್ ಠಾಣೆ ತೆರೆಯಲು ಕ್ರಮ, ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ 2 ಕೋಟಿ ಮೀಸಲು, ಅದರಂತೆ ಒಬಿಸಿ, ಅಲ್ಪಸಂಖ್ಯಾತರಿಗೂ 2 ಕೋಟಿ ಮೀಸಲಿಡುವ ಮೂಲಕ ರೈತರು, ಕಾಯಕ ಜೀವಿಗಳು, ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ 48,018 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಟ್ಟಿರುವುದು ಸ್ವಾಗತಾರ್ಹ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net