ಎಸ್ಸಿ-ಎಸ್ಟಿ ಜನರಿಗೆ ಯೋಜನೆಗಳನ್ನು ತಲುಪಿಸಿ

1001182285.jpg
Published on

ದಾವಣಗೆರೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಹೆಚ್ಚಿನ ಜಾಗೃತಿ ವಹಿಸಿ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳಿಂದ ಪ.ಜಾತಿ, ಪ.ಪಂಗಡ ಉಪಯೋಜನೆ, ಬುಡಕಟ್ಟು ಉಪಯೋಜನೆಯ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಮೇಲ್ವಿಚಾರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸ್ಸಿ ಎಸ್ಟಿ ಜನರಿಗೆ ವಿವಿಧ ಇಲಾಖೆಗಳ ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಯೋಜನೆಯಡಿ ನೀಡಲಾಗುವ ಸೌಲಭ್ಯ, ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ಒದಗಿಸಬೇಕು. ಇಲಾಖೆ ವ್ಯಾಪ್ತಿಗೆ ಒಳಪಡುವ ಮಕ್ಕಳಿಗೆ ಬಾಲಕಾರ್ಮಿಕ, ಜೀತ ಪದ್ದತಿ ಕುರಿತು ಬೀದಿನಾಟಕ ಆಯೋಜನೆ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಅಗತ್ಯ ಪಠ್ಯಪುಸ್ತಕ, ಶೂ ಇನ್ನಿತರೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಕೆಲವು ಇಲಾಖೆ ಹಾಗೂ ನಿಗಮಗಳಲ್ಲಿ ಹಲವು ಲೋಪಗಳು ಕಂಡುಬರುತ್ತಿದ್ದು, ತ್ವರಿತವಾಗಿ ಪರಿಹಾರ ಕಂಡುಕೊಂಡು, ಕಾರ್ಯಕ್ರಮಗಳನ್ನು ಫಲಾನುಭವಿಗಳಿಗೆ ಕಾಲಮಿತಿಯೊಳಗೆ ಒದಗಿಸಬೇಕು ಎಂದು ತಾಕೀತು ಮಾಡಿದರು.

ಜೆಜೆಎಂ ಯೋಜನೆಯಡಿ ಈಗಾಗಲೇ 50 ಗ್ರಾಮಗಳಿಗೆ 24*7 ಶುದ್ಧ ಕುಡಿವ ನೀರು ಪೂರೈಕೆ ಮಾಡುತ್ತಿದ್ದು, ಜನವರಿ ವೇಳೆಗೆ 100 ಗ್ರಾಮಗಳಿಗೆ ಸುಸ್ಥಿರ ಮತ್ತು ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಗತಿ ವಿವರ: ಪ್ರಸಕ್ತ ಸಾಲಿಗೆ ವಿವಿಧ ಇಲಾಖೆ, ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯವಾರು ಸೇರಿ ಜಿಲ್ಲೆಗೆ ಒಟ್ಟು ಎಸ್.ಸಿ.ಪಿ.ಯಡಿ 149.67 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಇದರಲ್ಲಿ ಬಿಡುಗಡೆಯಾದ 80.48 ಕೋಟಿ ರೂ. ಅನುದಾನದಲ್ಲಿ ಶೇ.64.67 ರಷ್ಟು ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

ಗಿರಿಜನ ಉಪಯೋಜನೆಯಡಿ 92.47 ಕೋಟಿ ರೂ. ಹಂಚಿಕೆಯಾಗಿದ್ದು ಬಿಡುಗಡೆಯಾದ 48.16 ಕೋಟಿ ರೂ. ಮೊತ್ತದಲ್ಲಿ 37.73 ಕೋಟಿ ರೂ. ವೆಚ್ಚ ಮಾಡಿ ಶೇ 78.35 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕ್ರಿಯಾಯೋಜನೆ ಅನುಗುಣವಾಗಿ ಆಯಾ ಇಲಾಖೆಯವರು ಫಲಾನುಭವಿಗಳ ಪಟ್ಟಿ ಮತ್ತು ಯೋಜನೆಗಳಿಗೆ ಅನುಮೋದನೆ ಪಡೆದು ಬಿಡುಗಡೆಯಾದ ಮೊತ್ತವನ್ನು ಶೇ.100 ರಷ್ಟು ವೆಚ್ಚ ಮಾಡಬೇಕೆಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿ ನವೀನ್ ಮಠದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ ಇತರರಿದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net