ದಾಳಿಗೆ ಭದ್ರತಾ ವೈಫಲ್ಯವೇ ಕಾರಣ: ಸಂಸದ ಶ್ರೇಯಸ್ ಪಟೇಲ್ ಆರೋಪ

03_HSN_02 Shreyas Patel
ಶ್ರೇಯಸ್ ಪಟೇಲ್
Published on

ಹಾಸನ: ಕಾಶ್ಮೀರದ ಪಹಲ್ಗಾಮ್ ದಾಳಿಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಸಂಸದ ಶ್ರೇಯಸ್ ಪಟೇಲ್ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರನ್ನು ದಂಡಿಸುವ ವಿಷಯದಲ್ಲಿ ಇಡೀ ದೇಶ ಒಟ್ಟಾಗಿ ನಿಲ್ಲಬೇಕಿದೆ. ನಾವು ಕೇಂದ್ರದ ಪರ ಇದ್ದೇವೆ. ಆದರೆ ಎಲ್ಲೋ ಒಂದು ಕಡೆ ಭದ್ರತಾ ಲೋಪ ಇದೆ ಅನ್ನಿಸುತ್ತಿದೆ. ಆರ್ಟಿಕಲ್ 370 ತೆಗೆದ ಮೇಲೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಭದ್ರತೆಯ ಕಣ್ಗಾವಲು ಹೆಚ್ಚಿಸಬೇಕಿತ್ತು. ಮುಂದೆ ಹೀಗೆ ಆಗೋದು ಬೇಡ ಎಂದರು.

ಪಾಕ್ ವಿರುದ್ಧ ಯುದ್ಧ ಬೇಡ ಎಂದು ಸಿಎಂ ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ರಾಜಕೀಯ ಬದಿಗೊತ್ತಿ ಇಡೀ ದೇಶ ಒಮ್ಮತವಾಗಿ ನಿಂತು ಉಗ್ರರ ವಿರುದ್ಧ ಹೋರಾಡಬೇಕಿದೆ. ಇದರಲ್ಲಿ ಪಕ್ಷ, ಜಾತಿ, ಧರ್ಮ ನೋಡಬಾರದು. ಇಡೀ ದೇಶ ಉಗ್ರಗಾಮಿಗಳ ವಿರುದ್ಧ ನಿಲ್ಲಬೇಕಾಗುತ್ತದೆ. ಪ್ರಧಾನಮಂತ್ರಿ ಸರ್ವ ಪಕ್ಷ ಸಭೆ ಕರೆದಿದ್ದರು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಭಾಗಿಯಾಗಿದ್ದರು. ಹಿಂದುಗಳ ನರಮೇಧ ನಂತರವೇ ಅಲ್ಲಿ ಯಾವುದೇ ಭದ್ರತೆ ಇರಲಿಲ್ಲ ಎಂಬುದು ಗೊತ್ತಾಗಿದ್ದು, ಇದಕ್ಕೆ ಕಾರಣ ಯಾರು, ಏಕೆ ಭದ್ರತೆ ಕೊಟ್ಟಿರಲಿಲ್ಲ ಎಂದು ಪ್ರಶ್ನಿಸಿ, ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಇದರ ಬಗ್ಗೆ ಅನುಮಾನ ಹುಟ್ಟುತ್ತದೆ. ಭದ್ರತೆ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಪುನರುಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net