

ಕೊಡೇಕಲ್ : ದಾಳಿಂಬೆ ರೈತನಿಗೆ ಉತ್ತಮ ಲಾಭ ತರುವ ಬೆಳೆ. ಆದರೆ ಲಕ್ಷಾಂತರ ರೂ. ಸಾಲ ಮಾಡಿ ಬೆಳೆದ ದಾಳಿಂಬೆಗೆ ದುಂಡಾಣು(ಕ್ಯಾರ) ರೋಗ ತಗುಲಿದ್ದು, ಗಿಡಗಳು ಒಣಗುವುದರ ಜತೆಗೆ ಹಣ್ಣುಗಳು ಕೊಳೆಯುತ್ತಿವೆ. ಇದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಪ್ರಮುಖ ತೋಟಗಾರಿಕೆ ಬೆಳೆಯಾಗಿರುವ ದಾಳಿಂಬೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲೂ ರೈತರು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಸದ್ಯ ಹಣ್ಣು ಬಿಟ್ಟಿರುವ ದಾಳಿಂಬೆಗೆ ದುಂಡಾಣು ರೋಗ ಅಂಟಿದ್ದು, ಗಿಡಗಳಲ್ಲೇ ಹಣ್ಣುಗಳ ಮೇಲೆ ಚುಕ್ಕೆ ಮೂಡುತ್ತ ರಂಧ್ರದ ಮೂಲಕ ಹಣ್ಣುಗಳು ಗಿಡದಿಂದ ಉದುರಲಾರಂಭಿಸಿವೆ.
ದುAಡಾಣು ರೋಗ ದಾಳಿಂಬೆ ಬೆಳೆಗಾರರನ್ನು ಪ್ರತಿವರ್ಷ ಕಾಡುತ್ತಲೇ ಇದೆ. ಆದರೆ ಈ ವರ್ಷ ಹೆಚ್ಚಿನ ಹಾನಿ ಸಂಭವಿಸಿದ್ದು, ಸಹಜವೇ ಬೆಳೆಗಾರರ ನೆಮ್ಮದಿ ಹಾಳು ಮಾಡಿದೆ. ದುಂಡಾಣು ರೋಗ ಒಂದು ಹಣ್ಣಿನಿಂದ ಇನ್ನೊಂದು ಹಣ್ಣಿಗೆ ವ್ಯಾಪಿಸುತ್ತದೆ. ಇದೊಂದು ಬ್ಯಾಕ್ಟೇರಿಯಾ ರೋಗವಾಗಿರುವ ಕಾರಣ ವೈಜ್ಞಾನಿಕವಾಗಿ ಬ್ಯಾಕ್ಟೀರಿಯಲ್ ಬ್ಲೆÊಂಟ್ ಆಯಿಲ್ ಎಂದು ಕರೆಯಲಾಗುತ್ತದೆ.
ಕೊಡೇಕಲ್ ಸೇರಿ ಯಣ್ಣಿವಡಿಗೇರಿ, ರಾಜನಕೋಳೂರ, ಮಾಳನೂರ, ಗುಣಬಾಳ, ರಾಯನಗೋಳ, ರಾಯನಪಾಳೆ, ಯರಕಿಹಾಳ, ಬರದೇವನಾಳ ಮತ್ತು ಕೋಮಲಾಪುರಗಳಲ್ಲಿ ಶೇ.೭೫-೮೦ ಹೆಕ್ಟೇರ್ ದಾಳಿಂಬೆ ಬೆಳೆಯಲಾಗಿದೆ. ಇದರಲ್ಲಿ ಶೇ.೬೦-೭೦ ದಾಳಿಂಬೆ ದುಂಡಾಣು ರೋಗಕ್ಕೆ ತುತ್ತಾಗಿರುವ ಕಾರಣ ರೈತರು ಗಿಡಗಳನ್ನು ನಾಶಪಡಿಸುತ್ತಿದ್ದಾರೆ.
ಈ ಬೆಳೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ಕಾರಣ ತೋಟಗಾರಿಕೆ ಇಲಾಖೆ ರೋಗವನ್ನು ಯಾವ ರೀತಿ ನಿಯಂತ್ರಿಸಬಹುದು ಎಂಬ ಬಗ್ಗೆ ಮಾಹಿತಿ ನೀಡಬೇಕೆಂಬುದು ರೈತರ ಒತ್ತಾಯವಾಗಿದೆ.