

ರೋಣ: ತಾಲೂಕಿನಾದ್ಯಂತ ದಾಳಿಂಬೆ ಬೆಳೆಗೆ ದುಂಡಾಣು ಮತ್ತು ಕಾಯಿ ಕೊರಕ ರೋಗ ಕಾಣಿಸಿಕೊಂಡಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ರೋಣ, ಗಜೇಂದ್ರಗಡ ತಾಲೂಕುಗಳ 200ಕ್ಕೂ ಹೆಚ್ಚು ರೈತರು 700 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆದಿದ್ದಾರೆ.
ಮುಶಿಗೇರಿ, ನೆಲ್ಲೂರ, ಕಾಲಕಾಲೇಶ್ವರ, ಸೂಡಿ, ಜಕ್ಕಲಿ, ಅಬ್ಬಿಗೇರಿ ಸೇರಿ ಅನೇಕ ಗ್ರಾಮಗಳಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ದಾಳಿಂಬೆ ಬೆಳೆದಿದ್ದಾರೆ. ಈ ವರ್ಷ ಗಿಡಗಳು ಕಾಯಿ ಬಿಡಲು ಆರಂಭಿಸಿವೆ. ಆದರೆ, ಎಲೆ ಮತ್ತು ಕಾಯಿಗಳಿಗೆ ದುಂಡಾಣು ರೋಗದ ಜತೆಗೆ ಕಾಯಿ ಕೊರಕ ರೋಗವೂ ಕಾಣಿಸಿಕೊಂಡಿರುವುದರಿಂದ ಗಿಡಗಳು ಒಣಗುತ್ತಿವೆ. ದುಂಡಾಣು ಮತ್ತು ಕಾಯಿ ಕೊರಕ ರೋಗ ತಡೆಗಟ್ಟಲು ಕೃಷಿ ವಿಜ್ಞಾನಿಗಳು ಹಾಗೂ ವೈದ್ಯರು ನೀಡುವ ಸಲಹೆ ಆಧರಿಸಿ ಸಾಕಷ್ಟು ಕ್ರಿಮಿನಾಶಕ ಸಿಂಪಡಣೆ ಮಾಡಿದ್ದೇವೆ. ಆದರೂ ಐದು ಎಕರೆ ದಾಳಿಂಬೆ ಬೆಳೆ ಸಂಪೂರ್ಣವಾಗಿ ಹಾನಿಗೀಡಾಗಿದೆ. ಇದರಿಂದಾಗಿ ದಾಳಿಂಬೆ ಗಿಡಗಳನ್ನೆಲ್ಲ ಕಿತ್ತು ಹಾಕಲು ತಿರ್ವನಿಸಿದ್ದೇವೆ ಎನ್ನುತ್ತಾರೆ ಪಟ್ಟಣದ ರೈತ ವಿಜಯಕುಮಾರ ಸಜ್ಜನ.
ದುಂಡಾಣು ಮತ್ತು ಕಾಯಿ ಕೊರಕ ರೋಗ ತಡೆಯಲು ರೈತರಿಗೆ ಇಲಾಖೆ ತಾಂತ್ರಿಕ ಸಲಹೆಗಳನ್ನು ನೀಡುತ್ತ ಬಂದಿದೆ. ಹವಾಮಾನ ಆಧರಿಸಿ ಬರುವ ಈ ರೋಗಾಣು ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಸರ್ಕಾರ ಇಂತಹ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ನೆರವು ನೀಡಲು ಯಾವುದೇ ಯೋಜನೆ ರೂಪಿಸಿಲ್ಲ.| ಎಂ.ಬಿ. ತಾಂಭೋಟಿ
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಟಿ ಮಾಡುವುದರಿಂದ ಹಿಡಿದು ಫಲ ಬರುವವರೆಗೆ ಒಂದು ಎಕರೆ ದಾಳಿಂಬೆಗೆ ರೈತರು ಕನಿಷ್ಠ 1 ಲಕ್ಷ ರೂ. ಖರ್ಚು ಮಾಡುತ್ತಾರೆ. ನಾಟಿ ಮಾಡಿ 4 ವರ್ಷಕ್ಕೆ ಇಳುವರಿ ಬರುತ್ತದೆ ಎನ್ನುವಷ್ಟರಲ್ಲಿ ದುಂಡಾಣು ಮತ್ತು ಕಾಯಿ ಕೊರಕ ರೋಗ ವಕ್ಕರಿಸುತ್ತದೆ. ಹೀಗಾಗಿ ತಾಲೂಕಿನ ರೈತರು ದಾಳಿಂಬೆ ಬೆಳೆಯವುದನ್ನೇ ಕೈ ಬಿಡುತ್ತಿದ್ದಾರೆ. | ಶಶಿಧರ ಹೂಗಾರ ದಾಳಿಂಬೆ ಬೆಳೆಗಾರ