

ಹುಬ್ಬಳ್ಳಿ: ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ನಿರ್ವಿುಸಲಾದ ಹುತಾತ್ಮ ಯೋಧ ಕರವೀರಪ್ಪ ಕಮತರ ಅವರ ಕಂಚಿನ ಪುತ್ಥಳಿಯನ್ನು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಭಾನುವಾರ ಅನಾವರಣಗೊಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ಅವರು, ಕೋಳಿವಾಡ ಗ್ರಾಮದ ಕರವೀರಪ್ಪ ಸ್ಮಾರಕ ಸಮಿತಿ ನೇತೃತ್ವದಲ್ಲಿ ಸ್ಮಾರಕ ನಿರ್ವಿುಸಿ ದೇಶಕ್ಕೆ ಮಾದರಿಯಾಗಿದೆ. ಧಾರವಾಡ ಜಿಲ್ಲೆ ಅನೇಕ ದಾರ್ಶನಿಕರು, ಸಾಹಿತಿಗಳು, ಹೋರಾಟಗಾರರು ಸೇರಿದಂತೆ ದೇಶಭಕ್ತರನ್ನು ನೀಡಿದೆ. ಯೋಧರು ಗಡಿಯಲ್ಲಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ ವೀರ ಮರಣ ಅಪ್ಪುತ್ತಿದ್ದರೆ, ಕೆಲ ದೇಶದ್ರೋಹಿಗಳು ಶತ್ರು ರಾಷ್ಟ್ರಗಳ ಸಹಕಾರದಿಂದ ದೇಶದ್ರೋಹಿ ಚಟುವಟಿಕೆ ಮಾಡುತ್ತಿದ್ದಾರೆ. ಆ ಮೂಲಕ ಭಾರತ ಮಾತೆಯ ಎದೆಗೆ ಚೂರಿ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಗ್ರಾಮದ ಬಹುದಿನಗಳ ಬೇಡಿಕೆಯಾದ ಪದವಿ ಪೂರ್ವ ಮಹಾವಿದ್ಯಾಲಯ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಕೋಳಿವಾಡ ಗ್ರಾಪಂ ಅಧ್ಯಕ್ಷ ಗಂಗಾಧರ ಗಾಣಿಗೇರ ಮಾತನಾಡಿ, ಯೋಧ ಕರವೀರಪ್ಪ 2003ರಲ್ಲೇ ಹುತಾತ್ಮರಾಗಿದ್ದರು. ಆದರೆ, ಕಳೆದ 6 ತಿಂಗಳುಗಳ ಹಿಂದೆ ಸಮಿತಿ ರಚಿಸಿ ಸ್ಮಾರಕ ನಿರ್ವಿುಸಲಾಗಿದೆ ಎಂದರು.
ಹುತಾತ್ಮ ಯೋಧ ಕರವೀರಪ್ಪ ಅವರ ತಂದೆ ವೀರಪ್ಪ ಕಮತರ ಹಾಗೂ ತಾಯಿ ಶಂಕ್ರವ್ವ ಕಮತರ ಹಾಗೂ ನಿವೃತ್ತ, ಹಾಲಿ ಯೋಧರನ್ನು ಸನ್ಮಾನಿಸಲಾಯಿತು. ಶಕುಂತಲಾ ಚಾಕಲಬ್ಬಿ ಕರವೀರಪ್ಪ ಕುರಿತು ವಿವರಿಸಿದರು. ನಿರಾಮಯ ಫೌಂಡೇಷನ್ ಅಧ್ಯಕ್ಷ ಮಲ್ಲಿಕಾರ್ಜು ಬಾಳಿಕಾಯಿ, ನಿವೃತ್ತ ಏರ್ ಕಮಾಂಡರ್ ಸಿ.ಎಸ್. ಹವಾಲ್ದಾರ್ ಮಾತನಾಡಿದರು.
ಧಾರವಾಡ ರಾಮಕೃಷ್ಣ ಆಶ್ರಮದ ಸ್ವಾಮಿ ವಿಜಯಾನಂದ ಸರಸ್ವತಿ ಸ್ವಾಮೀಜಿ, ಭೈರನಟ್ಟಿ ವಿರಕ್ತಮಠದ ದೊರೆಸ್ವಾಮಿ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಚೈತ್ರಾ ಶಿರೂರು, ತಾಪಂ ಸದಸ್ಯೆ ದ್ಯಾಮಕ್ಕ ಸತ್ಯಮ್ಮನವರ, ಕಿಮ್್ಸ ನಾಮನಿರ್ದೇಶಿತ ಸದಸ್ಯ ರಾಜಶೇಖರ ಕಂಪ್ಲಿ ಇದ್ದರು.
ಬೃಹತ್ ಶೋಭಾಯಾತ್ರೆ: ಕೋಳಿವಾಡ ಗ್ರಾಮದಲ್ಲಿ 100 ಮೀ. ಉದ್ದದ ತಿರಂಗಾ ಧ್ವಜದ ಮೆರವಣಿಗೆ ನಡೆಯಿತು. ವಾದ್ಯ ಮೇಳ, ಪೂರ್ಣ ಕುಂಭ ಮೆರವಣಿಗೆ ಮೂಲಕ ಕರವೀರಪ್ಪ ಭಾವಚಿತ್ರದ ಶೋಭಾಯಾತ್ರೆ ನಡೆಯಿತು. ಸಾವಿರಾರು ಜನ ಪಾಲ್ಗೊಂಡಿದ್ದರು. ಹಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ವಣವಾಗಿತ್ತು.