ದಾರ್ಶನಿಕರ ಜಯಂತ್ಯುತ್ಸವ 31ಕ್ಕೆ - ಎಡಿಸಿ ಲೋಕೇಶ್ ಮಾಹಿತಿ

dvg-adc-meeting-aug-14.jpg
Published on

ದಾವಣಗೆರೆ: ಕಾಯಕಯೋಗಿ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವವನ್ನು ಆ.31ರಂದು ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಅಂದು ಬೆಳಗ್ಗೆ 11 ಗಂಟೆ ಹಾಗೂ ಮಧ್ಯಾಹ್ನ 3 ಗಂಟೆಗೆ ಕ್ರಮವಾಗಿ ಉಭಯ ದಾರ್ಶನಿಕರ ಜಯಂತಿ ಆಚರಿಸಲಾಗುವುದು ಎಂದು ತಿಳಿಸಿದರು.

ದಾರ್ಶನಿಕರ ವ್ಯಕ್ತಿತ್ವದ ಚಿತ್ರಣವನ್ನು ನೃತ್ಯ, ನಾಟಕ ಹಾಗೂ ಉಪನ್ಯಾಸದ ಮೂಲಕ ಮುಂದಿನ ಪೀಳಿಗೆಗೆ ಉಣಬಡಿಸಬೇಕಿದೆ. ಎಲ್ಲಾ ಶಾಲೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಶರಣರ ಜಯಂತ್ಯುತ್ಸವ ಆಚರಿಸಲು ಸುತ್ತೋಲೆ ಹೊರಡಿಸಲಾಗುವುದು ಎಂದರು.

ನುಲಿಯ ಚಂದಯ್ಯನವರು 12ನೇ ಶತಮಾನದ ವಚನಕಾರರಾಗಿದ್ದು, ಬಸವಣ್ಣನವರ ಸಮಕಾಲೀನರಾಗಿದ್ದಾರೆ. ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದ್ದಾರೆ. ಸಾಮಾಜಿಕ ಕ್ರಾಂತಿಯ ಹರಿಕಾರ ನಾರಾಯಣ ಗುರುಗಳ ಸಂದೇಶಗಳನ್ನು ಸಮಾಜಕ್ಕೆ ತಿಳಿಸಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ನುಲಿಯ ಚಂದಯ್ಯ ಸಮಾಜದ ಆನಂದಪ್ಪ, ರಾಜೀವ್ ಪಾಟೀಲ್, ಈಡಿಗ ಸಮಾಜ ಜಿಲ್ಲಾಧ್ಯಕ್ಷ ಶಂಕರ್, ಕಾರ್ಯದರ್ಶಿ ಎ.ನಾಗರಾಜ್ ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net