

ಬೀರೂರು: ಸರ್ಕಾರಿ ಶಾಲೆಗಳು ಕುಡಿಯುವ ನೀರು ಮತ್ತು ಶೌಚಗೃಹದಂಥ ಸೌಲಭ್ಯಗಳ ಕೊರತೆಯಿಂದ ನರಳುತ್ತಿವೆ. ಅಂಥ ಶಾಲೆಗಳಿಗೆ ದಾನಿಗಳ ಸಹಕಾರ ಬಹುಮುಖ್ಯ ಎಂದು ಪುರಸಭೆ ಸದಸ್ಯೆ ಜ್ಯೋತಿ ಸಂತೋಷ್ ತಿಳಿಸಿದರು.
ಪಟ್ಟಣದ ಮಾರ್ಗದಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ್ಯಾಬ್ ಫೌಂಡೇಷನ್, ನ್ಯಾಬ್‌ಫಿನ್ಸ್ ಸಿಎಸ್‌ಆರ್ ಮತ್ತು ಸುಲಭ ಅಂತಾರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆ ಆರ್ಥಿಕ ನೆರವಿನಿಂದ ಹಮ್ಮಿಕೊಂಡಿದ್ದ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಇಲ್ಲದಿರುವುದರಿಂದ ಹೆಚ್ಚಿನ ಹಣ ಖರ್ಚು ಮಾಡಿ ಪಾಲಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಾರೆ. ಇದೇ ಸ್ಥಿತಿ ಮುಂದುವರಿದರೆ ಸರ್ಕಾರಿ ಶಾಲೆಗಳು ಮುಚ್ಚುತ್ತವೆ. ಸರ್ಕಾರಕ್ಕೆ ದಾನಿಗಳು ಸಹಕಾರ ನೀಡಿ ಶಾಲೆಗಳನ್ನು ಉಳಿಸಬೇಕು ಎಂದರು.
ಶಾಲೆ ಮುಖ್ಯಶಿಕ್ಷಕ ಎಚ್.ಎನ್.ಹನುಮಂತಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಸಂಸ್ಕಾರ, ಶಿಸ್ತು ಹಾಗೂ ಗುಣಮಟ್ಟದ ಶಿಕ್ಷಣ ದೊರೆಯುವುದರಲ್ಲಿ ಪಾಲಕರು ಸಂದೇಹಪಡಬೇಡಿ. ಉನ್ನತ ಹುದ್ದೆಯಲ್ಲಿರುವವರು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರು. ಅವರನ್ನು ಆದರ್ಶವಾಗಿರಿಸಿಕೊಂಡು ಶ್ರದ್ಧೆಯಿಂದ ಕಲಿತರೆ ಉತ್ತಮ ಭವಿಷ್ಯ ರೂಪುಗೊಳ್ಳಲಿದೆ ಎಂದರು.
ಹೈಟೆಕ್ ಶೌಚಗೃಹ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಶಿಕ್ಷಣಕ್ಕಾಗಿ ಡೆಸ್ಕ್‌ಟಾಪ್, ಶಾಲಾ ಕಟ್ಟಡಗಳಿಗೆ ಸುಣ್ಣಬಣ್ಣ ಮತ್ತು ನೀರಿನ ಶುದ್ಧೀಕರಣ ಯಂತ್ರ ಒದಗಿಸಲಾಯಿತು.
ಶಿಕ್ಷಕರಾದ ಗೌರಮ್ಮ, ಮೋತಿಲಾಲ್, ಶೈಲಜಾ, ಚಂದ್ರಕಲಾ, ರಾಜು, ತಿಮ್ಮಾಭೋವಿ, ಸುಧಾ, ಎಸ್‌ಡಿಎಂಸಿ ಅಧ್ಯಕ್ಷೆ ಕನ್ಯಕಾ, ಸದಸ್ಯೆ ವನಜಾಕ್ಷಿ, ಆನಂದ್ ಇತರರಿದ್ದರು.