

ಕರಿಕ್ಯಾತನಹಳ್ಳಿಯಲ್ಲಿ ದೃಷ್ಠಿಪೂಜಾ ಕಾರ್ಯಕ್ರಮ
ಹಿರೀಸಾವೆ : ದಾನಕಾರ್ಯದಿಂದ ಅನಂತ ಪುಣ್ಯ ಲಭ್ಯ ಎಂದು ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಹೋಬಳಿಯ ಕರಿಕ್ಯಾತನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿದ್ದ ಶ್ರೀ ಕರಿಕ್ಲಮ್ಮದೇವಿ ಮತ್ತು ಮನೆಯಮ್ಮ ದೇವಿ ಸನ್ನಿಧಿ ಕಲಶಾರೋಹಣ ಹಾಗೂ ದೃಷ್ಠಿಪೂಜಾ ಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ನೀಡಿದರು. ದಾನವನ್ನು ಕೊಡುವುದು ಎಂದಿಗೂ ಗೌಪ್ಯವಾಗಿ ಇರಬೇಕು. ದಾನಕಾರ್ಯ ಪ್ರಚಾರಕ್ಕೆ ಸಲ್ಲದು. ದಾನ ಹಾಗೂ ಧರ್ಮ ಕಾರ್ಯದಿಂದ ಸಂಪಾದಿಸಿದ ಪುಣ್ಯ ನಮಗೆ ಎಂದೆಂದಿಗೂ ಮೀಸಲಿರುತ್ತದೆ. ಮುಂದಿನ ಜನ್ಮಕ್ಕೂ ಅದು ನಮ್ಮನ್ನು ಕಾಪಾಡುತ್ತದೆ ಎಂದರು.
ಮಾತೆಯರಿಗೆ ಗೌರವ ನೀಡಿ: ಶಕ್ತಿದೇವತೆಯ ಮಹಿಮೆ ಅಪಾರ ಎಂದ ಸ್ವಾಮೀಜಿ, ಸ್ತ್ರೀಯರು ಎಂದರೆ ಮನೆಯ ಲಕ್ಷ್ಮೀದೇವಿ ಇದ್ದಂತೆ. ಆಕೆ ನಲಿದರೆ, ಒಲಿದರೆ ಮನೆ ಬೃಂದಾವನವಾಗುತ್ತದೆ ಎಂದರು. ತವರು ಮನೆಯನ್ನೂ, ಗಂಡನ ಮನೆಯನ್ನೂ ಬೆಳಗುವ ಹೆಣ್ಣುಮಕ್ಕಳು ದೇವಿಗೆ ಸಮಾನರು. ಹಾಗಾಗಿ ವನಿತೆಯರಿಗೆ ಗೌರವ ನೀಡವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಂದೇಶ ನೀಡಿದರು.