ದಾನ, ಧರ್ಮದಿಂದ ಸಮಾಜದ ಬಾಂಧವ್ಯ ಮಧುರ

5
Published on

ಮೈಸೂರು: ದಾನ, ಧರ್ಮದಿಂದ ವ್ಯಕ್ತಿ ಹಾಗೂ ಸಮಾಜದ ಬಾಂಧವ್ಯ ಮಧುರವಾಗಿರುತ್ತದೆ ಎಂದು ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ನಗರದ ಜೀವಧಾರ ರಕ್ತ ನಿಧಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಕ್ತದಾನದ ಮಹತ್ವದ ಜಾಗೃತಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಸನಾತನ ಧರ್ಮದಲ್ಲಿ ದಾನಕ್ಕೆ ಅಪಾರ ಮಹತ್ವವಿದೆ. ದಾನ ಎಂಬುದು ನೀಡುವಿಕೆ. ನೀಡುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ದಾನ ಧರ್ಮದಿಂದ ವರ್ತಮಾನ, ಭವಿಷ್ಯ ಹಾಗೂ ಮುಂದಿನ ಜನ್ಮದಲ್ಲೂ ಪುಣ್ಯ ಫಲ ಸಿಗುವ ನಂಬಿಕೆ ನಮ್ಮದಾಗಿದೆ ಎಂದರು.

ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡುವುದು ಅಗತ್ಯವಿದೆ. ಉಪಯೋಗವಾಗುವುದನ್ನು ನೀಡುವುದು ಬಹಳ ಮುಖ್ಯ. ಆ ಮೂಲಕ ವ್ಯಕ್ತಿ, ಸಮಾಜದ ಸಂಬಂಧ ಮಧುರವಾಗಿರುವುದಲ್ಲದೆ, ಸಾಮಾಜಿಕ ಸಾಮರಸ್ಯ ಬೆಳೆಯಲು ಕಾರಣವಾಗುತ್ತದೆ ಎಂದು ಬಣ್ಣಿಸಿದರು.

ತಾನು ಕೊಡಲಾಗದಿದ್ದರು ಕೊಡಬಲ್ಲವರಿಂದ ದಾನ ಕೊಡಿಸಿ ಸಮಾಜದ ಹಿತ ಕಾಪಾಡಬೇಕು. ದಾನ ಮಾಡುವ ಕೈಗಳು ಸದಾ ಪುಣ್ಯದ ಕೈಗಳಾಗುತ್ತವೆ. ಶ್ರೀಮಂತ ಮತ್ತು ಬಡವ ಎಂಬ ಭೇದಭಾವವಿಲ್ಲದೆ ಪ್ರತಿಯೊಬ್ಬರೂ ನೀಡುವಿಕೆಯ ಗುಣವನ್ನು ಬೆಳೆಸಿಕೊಳ್ಳಬೇಕು. ಒಡವೆ, ಹಣ ಆಸ್ತಿ ಸಂಪತ್ತಿಗೆ ನಾವೇ ಕಾವಲುಗಾರರಾಗಬೇಕು. ಆದರೆ ದಾನ, ಧರ್ಮ ಮಾಡಿ ಆ ಮೂಲಕ ಸಮಾಜದ ವಿಶ್ವಾಸವನ್ನು ಜ್ಞಾನ, ಸ್ನೇಹ ಹಂಚಿದರೆ ಅವು ನಮಗೆ ಕಾವಲಾಗುತ್ತದೆ ಎಂದರು.

ಭೂದಾನ, ಗೋ ದಾನ, ಆಹಾರ, ಅಂಗಾಂಗಗಳ ದಾನ, ರಕ್ತದಾನ ಸೇರಿದಂತೆ ವಿವಿಧ ರೀತಿಯಲ್ಲಿ ನೀಡುವ ಗುಣ ಪುರಾತನ ಕಾಲದಿಂದಲೂ ಇದೆ. ಯುವಕರು ವಿದ್ಯಾರ್ಥಿಗಳು ಬಾಲ್ಯದಿಂದಲೂ ಪರಸ್ಪರ ನೆರವಾಗುವ, ಸಹಾಯಹಸ್ತ ಚಾಚುವ ಮನಸ್ಸನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಆಯೋಜಕರಾದ ಮುತ್ತಣ್ಣ, ಜಿ.ರಾಘವೇಂದ್ರ, ಆಲನಹಳ್ಳಿ ಎಂ.ಎನ್. ಚೇತನ್‌ಗೌಡ, ಮಮತಾ, ಸುರೇಶ್, ಪ್ರಭು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net