

ಅಥಣಿ: ಶಿವಯೋಗಿಗಳ ನೆಲದಲ್ಲಿ ಬದುಕುವುದೇ ಪೂರ್ವ ಜನ್ಮದ ಪುಣ್ಯ. ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕಾದರೆ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಬೇಕು ಎಂದು ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ಪಟ್ಟಣದ ಗಚ್ಚಿನ ಮಠದಲ್ಲಿ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಬಸವ ಪುರಾಣ ಪ್ರವಚನದಲ್ಲಿ ಬಸವಣ್ಣನವರ ನಾಮಕರಣ (ತೊಟ್ಟಿಲು ಕಾರ್ಯಕ್ಕೆ) ಚಾಲನೆ ನೀಡಿ ಮಾತನಾಡಿದ ಅವರು, ಬಸವ ಪುರಾಣ ಕೇಳುವುದರಿಂದ ಏಳು ಜನ್ಮದ ಪಾಪ ಕಳೆಯುತ್ತದೆ ಎಂದರು.
ಅಥಣಿಯನ್ನು ಪಾವನಗೊಳಿಸಿದ ಮುರುಘೇಂದ್ರ ಶಿವಯೋಗಿಗಳು ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಹಾ ಜಂಗಮ ಜ್ಯೋತಿಯಾಗಿದ್ದಾರೆ. ಅವರ ನೆರಳಿನಲ್ಲಿ ಬದುಕುವ ನಾವು ಕೂಡ ಬಸವಣ್ಣವರ ವಚನ ಸಾಹಿತ್ಯವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದರು.
ದಾನ, ಧರ್ಮಗಳಲ್ಲಿರುವ ನೆಮ್ಮದಿ ಕಳ್ಳ ಮಾರ್ಗದಲ್ಲಿ ಇಲ್ಲ. ಅದಕ್ಕಾಗಿ 12ನೇ ಶತಮಾನದ ಎಲ್ಲ ಬಸವಾದಿ ಶಿವಶರಣರು ಸತ್ಯ, ಶುದ್ಧ ಕಾಯಕವನ್ನೇ ಬೋಧಿಸಿದವರು. ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ, ಬಸವಾದಿ ಶಿವಶರಣರ ವಚನಗಳನ್ನು ತಿಳಿಪಡಿಸುವುದು ಅವಶ್ಯ ಎಂದು ಹೇಳಿದರು.
ಬಸವಣ್ಣವರ ನಾಮಕರಣೋತ್ಸವ (ತೊಟ್ಟಿಲು ಕಾರ್ಯ): ತಳಿರು-ತೋರಣ, ಮಾವಿನ ಟೊಂಗೆ, ಬಾಳೆದಿಂಡು, ಹೂವಿನ ಅಲಂಕಾರದ ತೊಟ್ಟಿಲು, ಬೆಳಕಿನ ಚಿತ್ತಾರದ ಮಧ್ಯೆ ತೊಟ್ಟಿಲು ಕಾರ್ಯ ಜರುಗಿತು. ಅತ್ಯಂತ ಸಂಭ್ರಮ ಸಂತೋಷದಿಂದ ಮಹಿಳೆಯರು ಬಸವಣ್ಣನವರ ನಾಮಕರಣದಲ್ಲಿ ಪಾಲ್ಗೊಂಡು ತೊಟ್ಟಿಲು ಶಾಸವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ಎರಡು ನವಜಾತ ಶಿಶುಗಳನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಲಾಯಿತು. ಈ ಸಂದರ್ಭದಲ್ಲಿ 111 ನವವಿವಾಹಿತ ಮಹಿಳೆಯರಿಗೆ ಉಡಿ ತುಂಬಲಾಯಿತು.
ತೆಲಸಂಗದ ವೀರೇಶ್ವರ ದೇವರು, ಕೊಪ್ಪಳದ ಸಿದ್ದಲಿಂಗ ದೇವರು, ಜನವಾಡದ ಮಲ್ಲಿಕಾರ್ಜುನ ದೇವರು, ಡಾ.ಬಸವರಾಜ ಸ್ವಾಮೀಜಿ, ಬಸವಕಿರಣ ಸ್ವಾಮೀಜಿ, ಆನಂದ ದೇವರು, ಸಂಗೀತ ಕಲಾವಿದರು ಮತ್ತಿತರರು ಇದ್ದರು.