

ರಾಮನಗರ: ನಗರದ ರೇಷ್ಮೆಗೂಡು ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ 1 ಕೆ.ಜಿ. ರೇಷ್ಮೆಗೂಡಿನ ದರ ಸಾವಿರ ರೂ. ದಾಟಿರುವುದಕ್ಕೆ ರೇಷ್ಮೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಸಂತಸ ವ್ಯಕ್ತಪಡಿಸಿದ್ದಾರೆ.
ದಿನದಿಂದ ದಿನಕ್ಕೆ ಗೂಡಿನ ದರ ಏರಿಕೆಯಾಗುತ್ತಿದ್ದು, ಬುಧವಾರ ದಾಖಲೆಗೆ ಬೆಲೆಗೆ ಮಾರಾಟವಾಗಿದೆ.
ಕಳೆದ ಕೆಲವು ದಿನಗಳಿಂದ 700-800 ರೂ. ಆಸುಪಾಸಿನಲ್ಲಿದ್ದ ದರ ಬುಧವಾರ ಏರಿಕೆ ಕಂಡಿದ್ದು, ಕನಕಪುರ ತಾಲೂಕಿನ ಸಿದ್ದಯ್ಯನದೊಡ್ಡಿ ಗ್ರಾಮದ ರಮೇಶ್ ಎಂಬ ರೈತ ತಂದಿದ್ದ 95 ಕೆ.ಜಿ. ರೇಷ್ಮೆ ಕೆ.ಜಿ.ಗೆ 1043 ರೂ.ನಂತೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ. ಕೊಂಡ್ಲಹಳ್ಳಿ ಮೊಳಕಾಲ್ಮೂರಿನ ರೈತ ತಂದಿದ್ದ 158 ಕೆ.ಜಿ. ಲಾಟಿಗೆ ಒಂದು ಕೆ.ಜಿ.ಗೆ 1042 ರೂ.ನಂತೆೆ ಮಾರಾಟವಾಗಿದೆ. ಒಟ್ಟಾರೆ ಬುಧವಾರದ ರೇಷ್ಮೆ ವಹಿವಾಟು ರೈತರಿಗೆ ಸಂತಸ ತರಿಸಿದೆ.
ದಿಟ್ಟ ಕ್ರಮ ಕಾರಣ: ಮಾರುಕಟ್ಟೆಗಳಲ್ಲಿ ರೇಷ್ಮೆಗೂಡಿಗೆ ಹೆಚ್ಚಿನ ದರ ಸಿಗದಂತೆ ನಿಯಂತ್ರಿಸುತ್ತಿದ್ದ ದಲ್ಲಾಳಿಗಳಿಗೆ ಕಡಿವಾಣ, ಮಾರುಕಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ, ರೇಷ್ಮೆ ಬೆಳೆಗಾರರಿಗೆ ಆಗುತ್ತಿದ್ದ ಕಿರುಕುಳಕ್ಕೆ ಬ್ರೇಕ್, ರೇಷ್ಮೆಗೂಡು ಕದಿಯುತ್ತಿದ್ದವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ, ಇ-ಪೇಮೆಂಟ್ ವ್ಯವಸ್ಥೆ ಜಾರಿ ಸೇರಿ ಸಚಿವ ಡಾ.ನಾರಾಯಣಗೌಡ ತೆಗೆದುಕೊಂಡ ಹಲವು ದಿಟ್ಟ ಕ್ರಮಗಳ ಪರಿಣಾಮವಾಗಿ ಇಂದು ದಾಖಲೆ ದರಕ್ಕೆ ರೇಷ್ಮೆಗೂಡು ಮಾರಾಟವಾಗುವ ಮೂಲಕ ರೈತರಿಗೆ ನೈಜ ಬೆಲೆ ಸಿಗಲು ಕಾರಣವಾಗಿದೆ. ರೇಷ್ಮೆ ದರ ಕಳೆದ ವರ್ಷಕ್ಕಿಂತ ಸರಾಸರಿ ಮೂರು ಪಟ್ಟು ಹೆಚ್ಚಾಗಿದೆ. 2020-21ನೇ ಸಾಲಿನಲ್ಲಿ ಪ್ರತಿ ಕೆ.ಜಿ. ರೇಷ್ಮೆ ಗೂಡಿಗೆ ಸರಾಸರಿ 300 ರೂಪಾಯಿ ಇತ್ತು. 2021ನೇ ಸಾಲಿನ ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ 700-800 ರೂ. ನಷ್ಟಿತ್ತು. ಆದರೆ, ಇಂದು 1043 ರೂ.ಗೆ ವಾರಾಟವಾಗುವ ಮೂಲಕ ದಾಖಲೆ ಸೃಷ್ಟಿಸಿದೆ.
ರೇಷ್ಮೆ ಬೆಳೆಯಿರಿ, ನಿಮ್ಮೊಂದಿಗೆ ಸರ್ಕಾರ ಇದೆ: ಪ್ರತಿ ಕೆಜಿ ಗೂಡಿಗೆ ಸಾವಿರ ರೂಪಾಯಿ ಗಡಿ ದಾಟಿರುವುದು ಬೆಳೆಗಾರರಿಗೆ ಸಂತೋಷ ತಂದಿದೆ. ಇದು ಬೆಳೆಗಾರರಲ್ಲಿ ಮತ್ತಷ್ಟು ಹುಮ್ಮಸ್ಸು ತರಿಸಿದ್ದು, ಗುಣಮಟ್ಟದ ರೇಷ್ಮೆಗೂಡು ಬೆಳೆಯಲು ಉತ್ತೇಜಿಸಿದಂತಾಗಿದೆ. ರೇಷ್ಮೆ ಮಾರುಕಟ್ಟೆಗಳಲ್ಲಿ ಆಗುತ್ತಿದ್ದ ಭ್ರಷ್ಟಾಚಾರ, ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿರುವುದೂ ದಾಖಲೆ ಬೆಲೆ ಸಿಕ್ಕಿರುವುದಕ್ಕೆ ಕಾರಣವಾಗಿದೆ.
ರೇಷ್ಮೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡ ಪರಿಣಾಮ ಗೂಡಿನ ದರವೂ ಭಾರಿ ಪ್ರವಾಣದಲ್ಲಿ ಹೆಚ್ಚಾಗುವ ನಿರೀಕ್ಷೆಯಿತ್ತು. ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರ ರೇಷ್ಮೆ ಬೆಳೆಗಾರರ ಜತೆಯಿದ್ದು, ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗುವುದು ಹಾಗೂ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ಸಿಗುವಂತೆ ನೋಡಿಕೊಳ್ಳುತ್ತೇನೆ. ರೇಷ್ಮೆ ಗೂಡು ದರ ನಾಲ್ಕು ಡಿಜಿಟ್‌ಗೆ ತಲುಪಿರುವುದು ಮತ್ತಷ್ಟು ರೈತರು ರೇಷ್ಮೆ ಬೆಳೆಯುವುದಕ್ಕೆ ಪ್ರೇರಣೆಯಾಗಲಿದೆ ಎಂದು ಡಾ.ನಾರಾಯಣ ಗೌಡ ತಿಳಿಸಿದ್ದಾರೆ.
ಬಿಡ್ಡಿಂಗ್ ತಂತ್ರಾಂಶ ನವೀಕರಣ: ಕಷ್ಟಪಟ್ಟು ರೇಷ್ಮೆ ಬೆಳೆಯುವ ರೈತರಿಗೆ ನೈಜ ಬೆಲೆ ಸಿಗಬೇಕು ಎನ್ನುವುದು ಡಾ.ನಾರಾಯಣ ಗೌಡ ಅವರ ಕನಸಾಗಿತ್ತು. ಆ ನಿಟ್ಟಿನಲ್ಲಿ ರೇಷ್ಮೆ ಇಲಾಖೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದರು. ಸಾಕಷ್ಟು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡ ಪರಿಣಾಮವಾಗಿ ದಿನದಿಂದ ದಿನಕ್ಕೆ ದರವೂ ಹೆಚ್ಚಾಗುತ್ತಿತ್ತು. ನಾಲ್ಕು ಡಿಜಿಟ್‌ಗೆ ತಲುಪುವ ನಿರೀಕ್ಷೆ ಇಲಾಖೆಗೆ ಇತ್ತು. ಹಾಗಾಗಿ, ಕೇವಲ ಮೂರು ಡಿಜಿಟ್ ಹೊಂದಿದ್ದ ಬಿಡ್ಡಿಂಗ್ ತಂತ್ರಾಂಶವನ್ನು ಅಪ್ಡೇಟ್ ಮಾಡಲಾಗಿತ್ತು. ತಂತ್ರಾಂಶ ನವೀಕರಿಸಿರುವುದರಿಂದ ನಾಲ್ಕು ಡಿಜಿಟ್‌ನಲ್ಲಿ ಬಿಡ್ಡಿಂಗ್ ವಾಡಲು ಸಹಕಾರಿಯಾಗಿದೆ.
ರೈತನ ಮಗನಾಗಿ, ರೇಷ್ಮೆ ಬೆಳೆಗಾರನಾಗಿದ್ದ ನನಗೆ ಸಾರ್ಥಕ ಕ್ಷಣವಾಗಿದೆ. ಡಾ. ನಾರಾಯಣಗೌಡ, ರೇಷ್ಮೆ ಸಚಿವ ನಾನು ಸಿಬಿ ರೇಷ್ಮೆ ಬೆಳೆಯುವುದಿಲ್ಲ. ಪ್ರತಿ ಬಾರಿಯೂ ಸಿಎಸ್‌ಆರ್ ರೇಷ್ಮೆಯನ್ನೇ ಬೆಳೆಯುತ್ತೇನೆ. ಚಾಕಿ ಮರಿಗಳಿಂದ ಹಿಡಿದು ರೇಷ್ಮೆಗೂಡು ಮಾರುಕಟ್ಟೆಗೆ ಹಾಕುವವರೆಗೂ ಉತ್ತಮ ಆರೈಕೆ ವಾಡಿದಾಗ ಉತ್ತಮ ಲಾಭ ಸಿಗುತ್ತದೆ. ನನ್ನ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಂತಾಗಿದೆ. ಪ್ರಥಮ ಬಾರಿಗೆ ಕೆ.ಜಿ. ರೇಷ್ಮೆ ಗೂಡಿಗೆ 1043 ರೂ. ಸಿಕ್ಕಿದ್ದು ಸಂತಸ ತಂದಿದೆ. ರಮೇಶ್, ರೇಷ್ಮೆ ಬೆಳೆಗಾರ, ಸಿದ್ದಯ್ಯನದೊಡ್ಡಿ, ಕನಕಪುರ ತಾಲೂಕು ಮಾರುಕಟ್ಟೆಯಲ್ಲಿ ರೈತರು ರೀಲರ್‌ಗಳ ಮಧ್ಯೆ ಸೌಹಾರ್ದ ಮೂಡುವಂತೆ ಮಾಡಲಾಗಿದೆ. ರೈತರಿಗೆ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ. ವಾರುಕಟ್ಟೆಗೆ ಬರುವ ರೈತರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಮಾರುಕಟ್ಟೆಯನ್ನು ರೈತಸ್ನೇಹಿಯಾಗಿ ಪರಿವರ್ತಿಸಲಾಗಿದೆ. ಮರೆಪ್ಪ ಬಿರಲದಿನ್ನಿ, ಡಿಡಿ, ಸರ್ಕಾರಿ ರೇಷ್ಮೆ ಮಾರುಕಟ್ಟೆ, ರಾಮನಗರ