

ಮೂಡಿಗೆರೆ: ಕಡೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಸಾರ್ವಜನಿಕರಲ್ಲಿ ಗೊಂದಲಗಳು ಏರ್ಪಟ್ಟಿವೆ. ಇಂಥ ಗೊಂದಲಗಳಿಗೆ ಕಿವಿಗೊಡದೆ ನೋಟಿಸ್ ಪಡೆದವರು ಸಭೆಯಲ್ಲಿ ಫಾರ್ಮ್ ಪಡೆದು ತಲುಪಿಸುವ ಜತೆಗೆ ಭೂ ಸ್ವಾಧೀನ ಪ್ರಕ್ರಿಯೆಗಾಗಿ ಜಾಗದ ದಾಖಲಾತಿಗಳನ್ನು ನೀಡಿದಲ್ಲಿ ಅದನ್ನು ಮರುಪರೀಶಿಲನೆ ನಡೆಸಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ತಹಸೀಲ್ದಾರ್ ರಾಜಶೇಖರ್‌ಮೂರ್ತಿ ತಿಳಿಸಿದರು.
ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆ ಅಗಲೀಕರಣಕ್ಕಾಗಿ ಬೇಕಾಗಿರುವ ಜಾಗವದ ಸರ್ವೇ ನಡೆಸಿ ನಿಯಮಾನುಸಾರ ಗುರುತಿಸಲಾಗಿದೆ. ಇನ್ನು 15 ದಿನದಲ್ಲಿ ಜಾಗದ ದಾಖಲೆಗಳನ್ನು ಕಂದಾಯ ಉಪವಿಭಾಗಾಧಿಕಾರಿಗೆ ತಲುಪಿಸುವಂತೆ ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಜಾಗದ ಮಾಲೀಕರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಫಾರ್ಮ್ ಪ್ರತಿಗಳನ್ನು ನೀಡಿ ಅದನ್ನು ಭರ್ತಿಮಾಡುವುದರೊಂದಿಗೆ ದಾಖಲಾತಿಗಳನ್ನು ಪಡೆದುಕೊಂಡರು. ಸಭೆಗೆ ಗೈರಾಗಿದ್ದ ನೋಟೀಸ್ ಪಡೆದಿರುವ ಜಾಗದ ಮಾಲೀಕರು, 15 ದಿನದಲ್ಲಿ ಉಪವಿಭಾಗಾಧಿಕಾರಿ ಕಚೇರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಮನವಿ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲ ಇಂಜಿನಿಯರ್‌ಗಳಾದ ರಾಜೇಶ್ ಮತ್ತು ಕಾಂಬ್ಳೆ ಇದ್ದರು.