

ಕಾರವಾರ : ಬಾಣಂತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮ್್ಸ ಆಸ್ಪತ್ರೆ ವೈದ್ಯರು ದಾಖಲೆಗಳನ್ನು ನಾಶಪಡಿಸಿ, ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಮೀನುಗಾರ ಮುಖಂಡರು ಆರೋಪಿಸಿದ್ದಾರೆ. ಮುಖಂಡರು ಜಿಲ್ಲಾಧಿಕಾರಿ ಕಚೇರಿ ಹಾಗೂ ಸಿಇಒ ಕಚೇರಿಗೆ ಸೋಮವಾರ ತೆರಳಿ ಈ ಸಂಬಂಧ ದೂರು ನೀಡಿದ್ದಾರೆ. ಕ್ರಿಮ್್ಸ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ತಂತ್ರಜ್ಞೆಯಾಗಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಹರ್ಷಿತಾ ಲಕ್ಷ್ಮಣ ಜಾಧವ್ ಎಂಬ ಯುವತಿ ಮೀನುಗಾರರ ಮುಖಂಡರ ಜತೆ ತೆರಳಿ ಆಸ್ಪತ್ರೆಯ ವೈದ್ಯರ ವಿರುದ್ಧ ದೂರು ನೀಡಿದ್ದಾಳೆ. ‘ಮಹಿಳೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ್ದು, ತಾನೇ ಎಂದು ಒಪ್ಪಿಕೊಳ್ಳುವಂತೆ ಹಿರಿಯ ವೈದ್ಯರು ಒತ್ತಡ ಹೇರುತ್ತಿದ್ದಾರೆ. ನಾನು ಯಾವುದೇ ಅರಿವಳಿಕೆ ನೀಡುವ ತರಬೇತಿ ಹೊಂದಿದವಳಲ್ಲ. ಆ ಕಾರ್ಯ ಮಾಡುತ್ತಿಲ್ಲ. ಅದನ್ನು ಸಂಬಂಧಪಟ್ಟ ವಿಭಾಗದ ವೈದ್ಯರು ಕಾರ್ಯನಿರ್ವಹಿಸುತ್ತಾರೆ.’ ಆದರೆ, ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ರಕ್ಷಣೆ ನೀಡಿ ಎಂದು ಹರ್ಷಿತಾ ಮನವಿ ಮಾಡಿದರು. ಸೆಪ್ಟೆಂಬರ್ 3 ರಂದು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಬಾಣಂತಿ ಗೀತಾ ಬಾನಾವಳಿ ಮೃತಪಟ್ಟಿದ್ದರು. ಈ ಸಂಬಂಧ ಮೃತಳ ಪತಿ ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ. ಗೀತಾ ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿದ್ದಾರೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಅದರಿಂದ ತಪ್ಪಿಸಿಕೊಳ್ಳಲು ವೈದ್ಯರು ದಾಖಲೆಗಖನ್ನು ನಾಶ ಮಾಡಲು ಯತ್ನ ಮಾಡುತ್ತಿದ್ದಾರೆ. ಸಣ್ಣ ನೌಕರರನ್ನು ಬಲಿಪಶು ಮಾಡಲು ಹೊರಟಿದ್ದಾರೆ ಎಂದು ಮುಖಂಡರು ದೂರಿದರು. ರಾಜು ತಾಂಡೇಲ, ರಾಘು ನಾಯ್ಕ, ಚೇತನ ಹರಿಕಂತ್ರ ಇತರರು ಈ ಸಂದರ್ಭದಲ್ಲಿದ್ದರು.
ಕ್ರಿಮ್್ಸ ಘಟನೆ ಸಂಬಂಧ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯ ಸದಸ್ಯರ ನೇಮಕಾತಿ ಆದ ನಂತರ ಎರಡು ದಿನದಲ್ಲಿ ತನಿಖೆ ಆರಂಭಿಸುತ್ತೇನೆ. ಆ ಸಂದರ್ಭದಲ್ಲಿ ಎಲ್ಲರ ಹೇಳಿಕೆ ಪಡೆಯಲಾಗುವುದು. | ಎಂ.ರೋಶನ್ ಜಿಪಂ ಸಿಇಒ