

ಕನಕಗಿರಿ: ನಿರಾಶ್ರಿತರಿಗೆ ಸೂರು ಒದಗಿಸಲು ಪಟ್ಟಣವು ಗ್ರಾಮ ಪಂಚಾಯಿತಿಯಾಗಿರುವಾಗಲೇ ನಾನಾ ಕಡೆಗಳಲ್ಲಿ ಮೀಸಲಿರಿಸಿದ್ದ ಜಾಗಗಳನ್ನು ತನ್ನ ಸುಪರ್ದಿಗೆ ವಹಿಸುವಂತೆ ಸ್ಥಳೀಯ ಪಟ್ಟಣ ಪಂಚಾಯಿತಿಯು ಮೇಲ್ದರ್ಜೆಗೇರಿದ 9 ವರ್ಷದ ಬಳಿಕ ಗಂಗಾವತಿ ತಾಲೂಕು ಪಂಚಾಯಿತಿಯೊಂದಿಗೆ ಪತ್ರ ವ್ಯವಹಾರ ನಡೆಸಿದೆ.
ಕನಕಗಿರಿ 2016ರಲ್ಲಿ ಗ್ರಾಪಂನಿಂದ ಪಪಂ ಆಗಿ ಮೇಲ್ದರ್ಜೆಗೇರಿದೆ. ಗ್ರಾಪಂ ಆಗಿದ್ದಾಗಲೇ 2002ರಲ್ಲಿ ಈರಾಳ ಬಸವೇಶ್ವರ ರಸ್ತೆಯಲ್ಲಿನ (ಸ್ವಾಮೇರ ಗದ್ದಿ) ಸರ್ವೇ ನಂ.282/3ರಲ್ಲಿನ 1-37 ಎ-ಗುಂ, 282/4ಪಿ1ರ 1-03 ಎ-ಗುಂ ಜಮೀನುಗಳನ್ನು ಖರೀದಿಸಿದ್ದರೆ, ಕಲಕೇರಿ ರಸ್ತೆಯಲ್ಲಿನ ಸರ್ವೇ ನಂ.144/ಪಿ3 ರಲ್ಲಿನ 4-08 ಎ-ಗುಂ, ಜಮೀನು ಖರೀದಿಸಿ ನಿರಾಶ್ರಿತರಿಗೆ ಸೂರು ಒದಗಿಸಲು ಮೀಸಲಿಡಲಾಗಿದೆ.
ಸರ್ವೇ ನಂ.282/3 ಹಾಗೂ 282/4ಪಿ1ರ ಒಟ್ಟು 3 ಎಕರೆ ಜಮೀನಿನಲ್ಲಿ 118 ನಿವೇಶನಗಳ ವಿನ್ಯಾಸ ರಚಿಸಲಾಗಿದೆ. 71 ಫಲಾನುಭವಿಗಳನ್ನು ಆಯ್ಕೆ ಮಾಡಿ ಈ ಜಾಗದಲ್ಲಿ ಅವರಿಗೆ ನಿರ್ಮಿತಿ ಕೇಂದ್ರದಿಂದ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಈ ನಿವಾಸಿಗಳಿಗೆ ಆಗ ತಾಪಂನಿಂದಾಗಲೀ ತಹಸೀಲ್ದಾರರಿಂದಾಗಲಿ ಹಕ್ಕುಪತ್ರ ಹಂಚಿಕೆ ಮಾಡಿಲ್ಲ. ಇನ್ನುಳಿದ 47 ನಿವೇಶನಗಳಲ್ಲಿ 23ರಲ್ಲಿ ಅನಧಿಕೃತವಾಗಿ ಮನೆ, ಶೆಡ್‌ಗಳನ್ನು ನಿರ್ಮಿಸಿಕೊಂಡಿರುವುದು ಮೇಲ್ನೋಟಕ್ಕೆ ಕಾಣಸಿಗುತ್ತದೆ.
ಸರ್ವೇ ನಂ.144/ಪಿ3ರಲ್ಲಿನ 4-08 ಎ-ಗುಂ ಜಾಗದಲ್ಲಿ 171 ನಿವೇಶನಗಳ ವಿನ್ಯಾಸ ರಚಿಸಿ, 40 ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರ ವಿತರಿಸಲಾಗಿರುತ್ತದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಹಲವು ಬಾರಿ ಈ ಬಗ್ಗೆ ವಿಚಾರಿಸಿದ್ದಾರೆ. ಹಕ್ಕು ಪತ್ರವಿಲ್ಲದೇ ಫಲಾನುಭವಿಗಳು ತೆರಿಗೆ ಪಾವತಿಸಲು, ಖಾತೆಯನ್ನು ಮುಂದುವರಿಸಲು ಸಮಸ್ಯೆಯಾಗುತ್ತಿದೆ ಎಂದು ಉಲ್ಲೇಖಿಸಿ ಸದರಿ ಜಾಗದ ಹಕ್ಕುಪತ್ರಗಳ ಪ್ರತಿ, ಇತರೆ ದಾಖಲೆಗಳನ್ನು ಒದಗಿಸಲು ಮೇ 3ರಂದು ಗಂಗಾವತಿಯ ತಾಪಂ ಇಒ ಅವರಿಗೆ ಮುಖ್ಯಾಧಿಕಾರಿ ಪತ್ರ ಬರೆದು ಕೋರಿದ್ದಾರೆ.
ಪ್ರಭಾವಿಗಳದ್ದೇ ಪ್ರಶ್ನೆ?
ಸರ್ವೇ ನಂ.144/ಪಿ3ರಲ್ಲಿನ 171 ನಿವೇಶನಗಳಲ್ಲಿ 40ಪ್ಲಾಟುಗಳು ನಿಗಮದಿಂದ ಹಂಚಿಕೆಯಾಗಿವೆ ಎನ್ನಲಾಗಿದೆ. ಉಳಿದಿದ್ದ 131 ನಿವೇಶನಗಳನ್ನು ಆಯಾ ಆಡಳಿತ ಅವಧಿಯ ಗ್ರಾಪಂ, ಪಪಂ ಸದಸ್ಯರು, ನೌಕರರು ತಮ್ಮ ಪ್ರಭಾವ ಬಳಸಿ ತಲಾ ಹಂಚಿಕೆ ಮಾಡಿಕೊಂಡು ತಮ್ಮ ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ಬರೆಯಿಸಿಕೊಂಡಿದ್ದರು. ಕೆಲವರು ತೆರಿಗೆ ಪಾವತಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿತ್ತು. ಆದರೆ, ಈ ರೀತಿಯಾಗಿ ಹಂಚಿಕೆ ಪಡೆದ ಬಗ್ಗೆ ಪತ್ರದಲ್ಲಿ ಉಲ್ಲೇಖವಾಗಿಲ್ಲ. ಇದರಿಂದ ಈ ನಿವೇಶನಗಳು ಏನಾಗುತ್ತವೆ ಎನ್ನುವ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದೆ.
ಕನಕಗಿರಿ ಪಟ್ಟಣ ಪಂಚಾಯಿತಿಯಿಂದ ಆಶ್ರಯ ಜಾಗಗಳ ಹಸ್ತಾಂತರಕ್ಕೆ ಪತ್ರ ಬಂದಿದೆ. ಈ ಬಗ್ಗೆ ಜಿಪಂ ಸಿಇಒ ಅವರಿಗೆ ಮಾರ್ಗದರ್ಶನಕ್ಕಾಗಿ ಪತ್ರ ಬರೆಯಲಾಗಿದೆ. ಮೇಲಧಿಕಾರಿಗಳ ಆದೇಶ ಬಂದ ಮೇಲೆ ಹಸ್ತಾಂತರಕ್ಕೆ ಕ್ರಮ ವಹಿಸಲಾಗುವುದು.
ರಾಮರೆಡ್ಡಿ ಪಾಟೀಲ್
ತಾಪಂ ಇಒ ಗಂಗಾವತಿ
ಆಶ್ರಯ ಯೋಜನೆಗಾಗಿ ಗ್ರಾಪಂ ಇರುವಾಗ ಮೀಸಲಿರಿಸಿದ್ದ ಜಾಗಗಳು ತಾಪಂನಲ್ಲೇ ಉಳಿದುಕೊಂಡಿವೆ. ಇದರಿಂದ ಮೊದಲಿಗೆ ಸ್ಥಳೀಯ ತಾಪಂಗೆ ಪತ್ರ ಬರೆದಿದ್ದು, ಅಲ್ಲಿ ದಾಖಲೆಗಳು ದೊರೆಯದಿದ್ದರಿಂದ ಗಂಗಾವತಿ ತಾಪಂ ಇಒಗೆ ಪತ್ರ ಬರೆಯಲಾಗಿದೆ.
ದತ್ತಾತ್ರೇಯ ಹೆಗಡೆ
ಮುಖ್ಯಾಧಿಕಾರಿ, ಪಪಂ ಕನಕಗಿರಿ