

ಆಳಂದ: ಬಿಸಿಯೂಟ ಯೋಜನೆಯಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗುತ್ತಿದ್ದು, ಆದರೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಶಾಸಕ ಬಿ.ಆರ್.ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ತೋಂಟದಾರ್ಯ ಅನುಭವ ಮಂಟಪದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಮಧ್ಯಾಹ್ನ ಉಪಾಹಾರ ಯೋಜನೆಯಡಿ ಬುಧವಾರ ಹಮ್ಮಿಕೊಂಡಿದ್ದ ಮುಖ್ಯಗುರು, ಮುಖ್ಯ ಅಡುಗೆಯವರು ಮತ್ತು ಸಿಬ್ಬಂದಿಗೆ ಸ್ವಚ್ಛತೆ, ಸುರಕ್ಷತೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಅಡುಗೆ ಸಿಬ್ಬಂದಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಡುಗೆ ಸಮವಸ್ತç ಧರಿಸಬೇಕು. ನಮ್ಮಲ್ಲಿ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗುತ್ತಿಲ್ಲ ಎಂದು ಹೇಳಿದರು.
ಸರ್ಕಾರ ಬಿಸಿಯೂಟ ಯೋಜನೆಗಾಗಿ ವರ್ಷಕ್ಕೆ 12 ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೂ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಕಾರಣವೇನು ಎಂಬುದನ್ನು ಅಧಿಕಾರಿಗಳು, ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಹೇಳಬೇಕು. ಗುಣಮಟ್ಟದಿಂದ ಬಿಸಿಯೂಟ ಸಿದ್ಧಪಡಿಸಿ, ಎಲ್ಲ ಮಕ್ಕಳಿಗೂ ತಲುಪಿಸುವ ಕೆಲಸವಾಗಲಿ ಎಂದು ತಾಕೀತು ಮಾಡಿದರು.
ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಚಂದ್ರಕಾAತ ಕಾಂಬಳೆ ಪ್ರಾಸ್ತಾವಿಕ ಮಾತನಾಡಿ, ತಾಲೂಕಿನಲ್ಲಿ 334 ಶಾಲೆಗಳಿದ್ದು, 42,178 ಮಕ್ಕಳು ಬಿಸಿಯೂಟ ಯೋಜನೆಯ ಫಲಾನುಭವಿಗಳಾಗಿದ್ದಾರೆ. 3 ಸರ್ಕಾರೇತರ ಸಂಘ- ಸಂಸ್ಥೆಗಳು ಯೋಜನೆಯಡಿ ಕೆಲಸ ಮಾಡುತ್ತಿವೆ ಎಂದರು.
ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಸಿದ್ದರಾಮ ಪಾಟೀಲ್, ಮಲ್ಲಿನಾಥ ಖಜೂರಿ, ನರಸಪ್ಪ ಬಿರಾದಾರ, ಮಜರ್ ಹುಸೇನ್, ಆರೀಪ್ ಅಲಿ, ಪ್ರಕಾಶ ಕೋಟ್ರೆ, ಅರವಿಂದ ಭಾಸಗಿ, ವಸಂತ ಫುಲಾರಿ, ಮರೆಪ್ಪ ಬಡಿಗೇರ ಇತರರಿದ್ದರು.