

ವಿಜಯಪುರ: ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಎಂದು ಸಾಹಿತಿ, ಚಿತ್ರನಟರು ಸಾಕಷ್ಟು ಬಾರಿ ಹೋರಾಟ ನಡೆಸಿದ್ದಾರೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮತ್ತೆ ದಾಖಲಾತಿ ಕೊರತೆ ನೆಪ ಹೇಳಿ ಸಾರ್ವಜನಿಕ ಶಿಕ್ಷಣ ಇಲಾಖೆ ಕನ್ನಡ ಶಾಲೆಗಳಿಗೆ ಬೀಗ ಹಾಕುತ್ತಿದೆ.
ವಿಜಯಪುರ ಜಿಲ್ಲೆಯಲ್ಲಿಯೇ 14 ಕನ್ನಡ ಶಾಲೆಗಳು ಬಂದ್ ಆಗಿವೆ. ಕಳೆದ ಮೂರು ವರ್ಷಗಳಿಂದ ಈ ಶಾಲೆ ಬಂದ್ ಆಗಿದ್ದರೂ ಜಿಲ್ಲಾಡಳಿತ ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಾಗಿರುವುದು. ಕನ್ನಡ ಭಾಷೆಗೆ ಕುತ್ತು ತಂದಿದೆ.
ವಿಜಯಪುರ ಜಿಲ್ಲೆಯಲ್ಲಿ ವಿಜಯಪುರ ನಗರದ ಕೆಬಿಎಸ್ ಶಾಲೆ ನಂ 2, ಕೆಬಿಎಚ್‌ಪಿಎಸ್ ಶಾಲೆ ನಂ 11, ವಿಜಯಪುರ ಗ್ರಾಮೀಣ ಭಾಗದಲ್ಲಿ ಎಲ್‌ಪಿಎಸ್ ಯಲ್ಲಡಗಿ ವಸ್ತಿ ಶಾಲೆ, ಬಸನಬಾಗೇವಾಡಿ ತಾಲೂಕಿನ ಕೊಲ್ಹಾರದ ಬೆಲ್ಲದ ಹಳ್ಳಿ ಎಲ್‌ಪಿಎಸ್ ಶಾಲೆ, ಕಾಖಂಡಕಿಯ ಚಿನಗುಂಡಿ ಎಲ್‌ಪಿಎಸ್ ಶಾಲೆ, ಬೆಳ್ಳುಬ್ಬಿಯ ದಿವಟಗೇರಿ ಎಲ್‌ಪಿಎಸ್ ಶಾಲೆ, ಇಂಡಿ ತಾಲೂಕಿನ ಯುಬಿಎಸ್ ಪ್ರಾಥಮಿಕ ಶಾಲೆ, ಇಂಡಿ ಚಂದರಾಜನ್ ವಸ್ತಿ ಶಾಲೆ, ಇಂಡಿ ತಾಲೂಕಿನ ಚಿಕ್ಕಮಸಳಿಯ ಯುಬಿಎಸ್ ಪ್ರಾಥಮಿಕ ಶಾಲೆ, ಇಂಡಿ ತಾಲೂಕಿನ ಎಂ. ನಗರ ಎಲ್‌ಟಿ ಎಲ್‌ಪಿಎಸ್ ಶಾಲೆ ಬಂದ್ ಆಗಿವೆ.
ಇದು ಅಲ್ಲದೇ ಸಿಂದಗಿಯ ಮೂರು ಪ್ರಾಥಮಿಕ ಶಾಲೆಗಳಾದ ಎಲ್‌ಪಿಎಸ್ ಶಾಲೆ ಚಿಕ್ಕ ರೂಗಿ, ಎಲ್‌ಪಿಎಸ್ ಐಟಿಐ ಕ್ಯಾಂಪಸ್ ಪ್ರಾಥಮಿಕ ಶಾಲೆ ಮೋರಟಗಿ ಹಾಗೂ ಎಂಪಿಎಸ್ ಮೋರಟಗಿ ಶಾಲೆಗಳಿಗೆ ಬೀಗ ಹಾಕಲಾಗಿದೆ.
ಕಳೆದ 3-4 ವರ್ಷಗಳಿಂದ ಈ ಶಾಲೆಯಲ್ಲಿ ಮಕ್ಕಳ ದಾಖಲಾತಿ ಇಲ್ಲದೇ ಈ ರೀತಿ ಕನ್ನಡ ಶಾಲೆಗಳು ಬಂದ್ ಮಾಡಲಾಗಿದೆ. ಇಲ್ಲಿ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಸಮೀಪದ ಗ್ರಾಮದ ಶಾಲೆಗಳಿಗೆ ದಾಖಲಾತಿ ನೀಡಲಾಗಿದೆ. ಶಿಕ್ಷಕರನ್ನು ಸಹ ವರ್ಗಾವಣೆ ಮಾಡಿದ ಕಾರಣ ಶಾಲೆಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ.
ಒಂದು ಮಗು ಕನ್ನಡ ಶಾಲೆಯಲ್ಲಿ ಓದಬೇಕು ಎಂದು ಹೇಳಿದರೆ, ಶಿಕ್ಷಕರ ನಿಯೋಜನೆ ಮಾಡಿ ಆ ಮಗುವಿಗೆ ಪಾಠ ಹೇಳಬೇಕು ಎನ್ನುವುದು ರಾಜ್ಯ ಸರ್ಕಾರದ ಆದೇಶವಿದೆ. ನಂಜುಂಡಪ್ಪ ವರದಿ ಸಹ ಇದನ್ನೇ ಪ್ರತಿಪಾದಿಸಿದೆ. ಆದರೆ ಕೆಲ ಅಧಿಕಾರಿಗಳು ಮಕ್ಕಳ ಹಾಜರಾತಿ ನೆಪ ಹೇಳಿ ಕನ್ನಡ ಶಾಲೆಗಳನ್ನು ಸದ್ದಿಲ್ಲದೇ ಮುಚ್ಚಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿಯೇ ಸದ್ಯ 14 ಶಾಲೆಗಳು ಮುಚ್ಚಲಾಗಿದೆ. ರಾಜ್ಯದಲ್ಲಿ 64 ಕನ್ನಡ ಶಾಲೆ ಈಗಾಗಲೇ ಮುಚ್ಚಲಾಗಿದೆ. ಇನ್ನೂ 548 ಕನ್ನಡ ಶಾಲೆಗಳ ಫಲಿತಾಂಶ ಶೂನ್ಯ ಇರುವ ಕಾರಣ ಅವುಗಳು ಸಹ ಮುಚ್ಚುವ ಹಂತದಲ್ಲಿ ಇವೆ. ಸರ್ಕಾರ ಆ ಶಾಲೆಗಳು ಮುಚ್ಚಬೇಕು ಎನ್ನುವ ನಿರ್ಧಾರಕ್ಕೆ ಬಂದಿದೆ. ಇದೇ ರೀತಿಯಾದರೆ ಗೋಕಾಕ ಚಳವಳಿಯ ವರದಿಯಂತೆ ಕರ್ನಾಟಕದಲ್ಲಿ ಕನ್ನಡವೇ ಮೊದಲು ಭಾಷೆ ಎನ್ನುವ ಹೋರಾಟ ಸದ್ಯ ವ್ಯರ್ಥವಾಗುತ್ತಿದೆ. ರಾಜ್ಯ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚಿ ಪರೋಕ್ಷವಾಗಿ ಖಾಸಗಿ ಶಾಲೆಗಳಿಗೆ ಉತ್ತೇಜನ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಬೇಡಿಕೆ ಇಟ್ಟರೆ ಶಾಲೆ ಪುನರಾರಂಭ:
ಕನಿಷ್ಟ 20-25 ಮಕ್ಕಳ ಹಾಜರಾತಿ ಇದ್ದರೆ ಮಾತ್ರ ಕನ್ನಡ ಶಾಲೆ ನಡೆಸಬಹುದು. ಆದರೆ 2-3 ಮಕ್ಕಳು ಮಾತ್ರ ಈ ಶಾಲೆಯಲ್ಲಿ ಕಲಿಯಲು ಬಂದರೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಸಮೀಪದ ಬೇರೆ ಶಾಲೆಗಳಿಗೆ ದಾಖಲಾತಿ ನೀಡಲಾಗಿದೆ. ಈ 14 ಶಾಲೆಗಳಲ್ಲಿ ವಿದ್ಯಾಭ್ಯಾಸ ಹೇಳಿಕೊಡುತ್ತಿದ್ದ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇದು ಕಳೆದ ಮೂರು ವರ್ಷಗಳ ಹಿಂದೆ ಈ 14 ಶಾಲೆ ಬಂದ್ ಮಾಡಲಾಗಿದೆ. ನಾನು ಈಗ ತಾನೆ ಡಿಡಿಪಿಐ ಆಗಿ ಅಧಿಕಾರ ಸ್ವೀಕರಿಸಿದ್ದೇನೆ. ಮುಂದೆ ಬಂದ್ ಆದ ಶಾಲೆಗಳಿಗೆ ಹೆಚ್ಚಿನ ಮಕ್ಕಳು ದಾಖಲಾತಿ ಬೇಡಿಕೆ ಇಟ್ಟರೆ ಖಂಡಿತವಾಗಿ ಶಾಲೆ ಪುನರಾರಂಭ ಮಾಡಲಾಗುವುದು. ಸರ್ಕಾರದ ನಿಯಮದಂತೆ ಒಬ್ಬ ವಿದ್ಯಾರ್ಥಿ ಕಲಿಯಲು ಬಯಸಿದರೆ ಶಾಲೆ ತೆರೆಯಬೇಕು ಎನ್ನುವುದು ಇದೆ. ಆದರೆ ಶಿಕ್ಷಕರ ಕೊರತೆ ಇರುವ ಕಾರಣ ಸದ್ಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಎನ್. ನಾಗೂರ ಹೇಳಿದರು.